ಮಂಗಳೂರು: ಜಿಲ್ಲಾಡಳಿತದ ಆದೇಶದಂತೆ ಮಂಗಳೂರಿನಲ್ಲಿ ಈ ಋತುಮಾನದ ಮೀನುಗಾರಿಕೆ ಇಂದು ಆರಂಭವಾಗಿದ್ದು, ಶೇ. 20ರಷ್ಟು ಬೋಟುಗಳು ಮಾತ್ರ ಇಂದು ಕಡಲಿಗಿಳಿದಿವೆ. ಮುಂದಿನ ದಿನಗಳಲ್ಲಿ ಉಳಿದ ಬೋಟುಗಳು ಕಡಲಿಗಿಳಿಯಲಿವೆ.
ಕೊರೊನಾ ಸೋಂಕಿನ ಭೀತಿಯಿಂದ ಮೇ ಅಂತ್ಯಕ್ಕೆ ಕೊನೆಗೊಳ್ಳಬೇಕಿದ್ದ ಕಳೆದ ಋತುಮಾನದ ಮೀನುಗಾರಿಕೆ ಮಾರ್ಚ್ ಕೊನೆಯ ವಾರದಲ್ಲಿಯೇ ಸ್ಥಗಿತಗೊಂಡಿತ್ತು. ಅಲ್ಲದೆ ಪ್ರತೀ ವರ್ಷದಂತೆ ಆಗಸ್ಟ್ 1ರಂದು ಮೀನುಗಾರಿಕೆ ಆರಂಭವಾಗದೆ ಸೆಪ್ಟೆಂಬರ್ 1ರಿಂದ ಆರಂಭವಾಗಿದೆ. ಈ ಮೂಲಕ ಐದು ತಿಂಗಳ ಬಳಿಕ ಮಂಗಳೂರಿನಲ್ಲಿ ಯಾಂತ್ರೀಕೃತ ಬೋಟುಗಳ ಮೀನುಗಾರಿಕೆ ಆರಂಭವಾಗಿದೆ.
ಇಂದಿನಿಂದ ಮೀನುಗಾರಿಕೆ ಆರಂಭವಾಗಿದ್ದು, ಹೊರ ರಾಜ್ಯದ ಮೀನುಗಾರಿಕಾ ಕಾರ್ಮಿಕರು ಆಗಮಿಸುತ್ತಿದ್ದಾರೆ. ಹೊರ ರಾಜ್ಯದ ಕಾರ್ಮಿಕರು ಕರ್ನಾಟಕಕ್ಕೆ ಆಗಮಿಸಿದ್ದಲ್ಲಿ ಅವರಗೆ ಕ್ವಾರಂಟೈನ್ ಅಗತ್ಯವಿಲ್ಲ ಎಂದು ಇತ್ತೀಚೆಗೆ ರಾಜ್ಯ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದ ಸಾಕಷ್ಟು ಕಾರ್ಮಿಕರು ಮಂಗಳೂರಿಗೆ ಆಗಮಿಸುತ್ತಿದ್ದಾರೆ.
ಆದ್ದರಿಂದ ಇಂದು ಕೇವಲ ಶೇ. 20ರಷ್ಟು ಪರ್ಸಿನ್ ಹಾಗೂ ಟ್ರಾಲ್ ಬೋಟುಗಳು ಕಡಲಿಗಿಳಿದಿದ್ದು, ಉಳಿದ ಬೋಟುಗಳು ದಿನ ಬಿಟ್ಟು ದಿನದಿಂದ ಕಡಲಿಗಿಳಿಯಲು ಸಜ್ಜಾಗಿವೆ.