ಮಂಗಳೂರು: ಮೂಳೆ ಕ್ಯಾನ್ಸರ್ನಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಇಲ್ಲಿನ ಇಂಡಿಯಾನ ಆಸ್ಪತ್ರೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.
ಬಾಲಕ ತೋಳು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ. ತಪಾಸಣೆ ನಡೆಸಿದಾಗ ಈತನಿಗೆ ಸಂಪೂರ್ಣ ತೋಳು ಹಾಗೂ ಭುಜದ ಮೂಳೆಯಲ್ಲಿ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಮೂಳೆ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞ ಡಾ.ನವನೀತ್ ಎಸ್ ಕಾಮತ್ ಅವರು ಶಸ್ತ್ರಚಿಕಿತ್ಸೆ ನಡೆಸಿದರು.
10 ವಾರಗಳ ಕಾಲ ಕಿಮೋ ಥೆರಪಿ ಮಾಡಲಾಯಿತು. ಈ ಶಸ್ತ್ರಚಿಕಿತ್ಸೆ ಸಾಮಾನ್ಯವಾಗಿರಲಿಲ್ಲ. ರಾಜ್ಯದಲ್ಲಿ ಇದು ಅಪರೂಪದ ಪ್ರಕರಣ. ಬಾಲಕನ ಸಂಪೂರ್ಣ ತೋಳಿನ ಮೂಳೆ ಹಾಗೂ ಭುಜವನ್ನು ಶಸ್ತ್ರಕ್ರಿಯೆ ಮೂಲಕ ತೆಗೆದು 194° ಡಿಗ್ರಿ ಸೆಲ್ಸಿಯಸ್ನಲ್ಲಿ ದ್ರವ ಸಾರಜನಕ ಬಳಸಿ ಗೆಡ್ಡೆಯ ಕೋಶಗಳನ್ನು ಸಂಪೂರ್ಣ ನಾಶಪಡಿಸಲಾಯಿತು.
ಬಳಿಕ ಮೂಳೆಯನ್ನು ಬಾಲಕನಿಗೆ ಜೋಡಿಸಲಾಯಿತು. ಸುಮಾರು 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈಗ ಬಾಲಕ ಯಾವುದೇ ತೊಂದರೆಯಿಲ್ಲದೆ ಚೇತರಿಸಿಕೊಂಡಿದ್ದಾನೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಕೈಯನ್ನೆ ಕತ್ತರಿಸುವ ಸಂಭವ ಎದುರಾಗುತ್ತದೆ ಎನ್ನುತ್ತಾರೆ ವೈದ್ಯರು.