ಮಂಗಳೂರು : ಮುಖ ವಿರೂಪವಾದ 10 ವರ್ಷದ ಬಾಲಕನಿಗೆ ಟೆಂಪೊರೋಮ್ಯಾಂಡಿಬ್ಯೂಲರ್ ಜಾಯಿಂಟ್ (ಟಿಎಂಜೆ) ಎಂಬ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ದೇಶದಲ್ಲಿ ಮಾಡಿದ ಮೊಟ್ಟಮೊದಲ ಶಸ್ತ್ರಚಿಕಿತ್ಸೆ ಆಗಿದ್ದು, ಇದು ಯಶಸ್ವಿಯಾಗಿ ನಡೆದು ಬಾಲಕನ ಮುಖದಲ್ಲಿ ವಿರೂಪ ಸರಿಯಾಗಿದೆ.
ಬಹರೈನ್ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಕುಟುಂಬದ ಮಗುವಿಗೆ ಜನಿಸಿದ ಕೆಲವೇ ದಿನಗಳಲ್ಲಿ ಬಾಯಿಯಲ್ಲಿ ಸಮಸ್ಯೆ ಆರಂಭವಾಗಿತ್ತು. ಎಂಜಲಿನ ಕೋಶದಲ್ಲಿ ಉಂಟಾದ ಇನ್ಪೆಕ್ಸನ್ನಿಂದ ಬಾಲಕನಿಗೆ ಪ್ಯಾರೊಟಿಡ್ ಆಬ್ಸಸ್ ರೂಪದಲ್ಲಿ ಆರಂಭವಾದ ಸಮಸ್ಯೆ ಬೆಳೆಯುತ್ತಾ ಹೋದಂತೆ ಆಂಕಿಲೋಸಿಸ್ಗೆ ಮಾರ್ಪಟ್ಟಿತ್ತು.
ಮಗುವಿನ ಕೆಳದವಡೆಯಲ್ಲಿ ಬೆಳವಣಿಗೆಯಿಲ್ಲದೆ ಮಗುವಿನ ಮುಖ ವಿರೂಪಗೊಂಡಿತ್ತು. ಬಾಲಕನಿಗೆ ಬಾಯಿ ತೆರೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ದ್ರವ ರೂಪದ ಆಹಾರವನ್ನು ಮಾತ್ರ ಸೇವಿಸಲು ಸಾಧ್ಯವಾಗುತ್ತಿತ್ತು. ಬಾಲಕನ ಸಮಸ್ಯೆ ಪರಿಹರಿಸಲು ಪೋಷಕರು ದೇಶದ ವಿವಿಧ ಆಸ್ಪತ್ರೆಗಳಿಗೆ ಹೋದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಬಂದ ಪೋಷಕರಿಗೆ ಹೊಸ ಭರವಸೆ ಸಿಕ್ಕಿತು.
ಚಿಕಿತ್ಸೆಯ ಬಗ್ಗೆ ತಂಡದ ಮೂಲಕ ಚರ್ಚಿಸಿದ ಡಾ.ಅಭಯ ಕಾಮತ್ ನೇತೃತ್ವದ ವೈದ್ಯರ ತಂಡ, ಭಾರತದ ಮೊಟ್ಟಮೊದಲ ಟಿಎಂಜೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ಹಲವಾರು ಶಸ್ತ್ರಚಿಕಿತ್ಸೆಗಳನ್ನು ಒಳಗೊಂಡ ಸಂಪೂರ್ಣ ಶಸ್ತ್ರಚಿಕಿತ್ಸೆಯಲ್ಲಿ ಕೆಳದವಡೆಯಲ್ಲಿ ಬೆಳವಣಿಗೆಗೆ ಅಗತ್ಯವಿರುವ ಪಕ್ಕೆಲುಬುಗಳನ್ನು ಬಳಸಿ, ಕೆಳಮಟ್ಟದ ಮೂಳೆಯನ್ನು ಹೊರತೆಗೆದು ಸ್ನಾಯುಗಳನ್ನು ನಡುವೆ ಜೋಡಿಸಿ ಅಂತರವನ್ನು ಸೃಷ್ಟಿಸಲಾಗಿತ್ತು.
ಇದರ ಜೊತೆಗೆ ಹೆಚ್ಚುವರಿಯಾಗಿ ಡಿಸ್ಟ್ರಾಕ್ಷನ್ ಓಸ್ಟಿಯೋಜೆನಿಸಿಸ್ ಬಳಸಿ ಮೂಳೆಗಳ ಉದ್ದವನ್ನು ಹೆಚ್ಚಿಸುವ ಚಿಕಿತ್ಸೆ ಮಾಡಲಾಯಿತು. ಬಾಲಕನಿಗೋಸ್ಕರ ಯುಎಸ್ಎಯ ಅಟ್ಲಾಂಟದ ಜಾಕ್ಸನ್ ವಿಲೆಯಿಂದ ತಯಾರಿಸಿದ ಜೋಡಣೆಯನ್ನು ತಂದು ಅಳವಡಿಸಲಾಯಿತು. ಈ ಚಿಕಿತ್ಸೆ ನಡೆದು ಆರು ತಿಂಗಳಾಗಿದ್ದು, ಎಲ್ಲಾ ಪರಿಶೀಲನೆಯ ಬಳಿಕ ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆ ಯಶಸ್ವಿ ಎಂದು ಪರಿಗಣಿಸಲಾಗಿದೆ. ಇದೀಗ ಬಾಲಕನು 30 ಎಂಎಂವರೆಗೆ ಬಾಯಿ ಅಗಲಿಸಲು ಸಫಲನಾಗಿದ್ದಾನೆ. ಬಾಲಕನಿಗೆ ಆದ ಯಶಸ್ವಿ ಶಸ್ತ್ರಚಿಕಿತ್ಸೆ ಹೆತ್ತವರಲ್ಲಿ ಖುಷಿ ಮೂಡಿಸಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಹಲವು ವರ್ಷಗಳಿಂದ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ಶವ ಪತ್ತೆ.. ಬೆಳಕಿಗೆ ಬಂದಿದ್ದು ಹೀಗೆ!