ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆ 15 ದಿನಗಳಿಂದ ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿ ಮತ್ತು ಟೀಂಗೆ ನಿರೀಕ್ಷಣಾ ಜಾಮೀನು ನೀಡದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಕೃತ್ಯ ನಡೆದಿದೆ ಎನ್ನಲಾಗಿದ್ದು, ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ, ಪ್ರಾಂಶುಪಾಲ ಕಾಶಿನಾಥ್ ಮತ್ತು ಮಂಜುನಾಥ ಮೇಳಕುಂದಿ, ಅರ್ಚನಾ ಹೊನಗೇರಿ, ಸುನಂದಾ ಸಿಐಡಿ ತನಿಖೆಯಿಂದ ತಲೆಮರೆಸಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಅಜ್ಞಾತ ಸ್ಥಳದಿಂದಲೇ ದಿವ್ಯಾ ಅಂಡ್ ಟೀಮ್ ನೀರಿಕ್ಷಣಾ ಜಾಮೀನು ಕೋರಿ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಆದರೀಗ ನೀರಿಕ್ಷಣಾ ಜಾಮೀನಿಗೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ. ಇದು ಸಂಘಟಿತ ಅಪರಾಧ, ಜಾಮೀನು ಕೊಟ್ಟರೆ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ. ಕಾರಣ ಈ ಐವರಿಗೆ ನಿರೀಕ್ಷಣಾ ಜಾಮೀನು ನೀಡಬೇಡಿ ಎಂದು ಕಲಬುರಗಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ. ದಿವ್ಯಾ ಹಾಗರಗಿ ಈ ಮೊದಲು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.
ಆದರೆ, ಪ್ರಕರಣದ ಬಳಿ ಬಿಜೆಪಿ ಸ್ಪಷ್ಟಪಡಿಸಿದ್ದು, ದಿವ್ಯಾ ಹಾಗರಗಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರಕಟಣೆ ಹೊರಡಿಸಿದೆ. ಇನ್ನು ಪ್ರಕರಣ ಸಂಬಂಧ ಸಿಐಡಿ ತನಿಖೆಯನ್ನು ಚುರುಕುಗೊಳಿಸಿದೆ. ನಗರದಲ್ಲಿ ಸಿಐಡಿ ಡಿಜಿಪಿ, ಎಸ್ಪಿ ಸೇರಿ ಸಿಐಡಿ ಅಧಿಕಾರಿಗಳ ಸಭೆ ನಡೆಸಿ, ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಕುರಿತಾಗಿ ಹಾಗೂ ಇಲ್ಲಿವರೆಗೆ ನಡೆದ ಪ್ರಗತಿ ಬಗ್ಗೆ ಚರ್ಚಿಸಿದರು. ಇದೇ ವೇಳೆ ತಲೆಮರೆಸಿಕೊಂಡ ಆರೋಪಿಗಳಿಗೆ ರಕ್ಷಣೆ ನೀಡಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವ ಸಂದೇಶವನ್ನು ಡಿಜಿ ಪಿ.ಎಸ್.ಸಂದು ರವಾನಿಸಿದ್ದಾರೆ.
ಪಿಎಸ್ಐ ನೇಮಕಾತಿ ಪ್ರಕರಣ ಸಂಬಂಧ ಈಗಾಗಲೇ ಕಾಂಗ್ರೆಸ್ ನಾಯಕರು ಹಾಗೂ ಶಾಸಕರ ಗನ್ ಮ್ಯಾನ್ ಸೇರಿದಂತೆ ಹಲವರನ್ನು ಸಿಐಡಿ ಬಂಧಿಸಿ ತನಿಖೆಗೊಳಪಡಿಸಿದೆ.
(ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕು.. 50 ಅಭ್ಯರ್ಥಿಗಳ ವಿಚಾರಣೆ)