ಕಲಬುರಗಿ: ಜಿಲ್ಲೆಯ ಕಾಳಗಿ ಪಟ್ಟಣದ ಹಿರೇಮಠ ಮಠಾಧಿಪತಿಗಳಾದ ಶಿವಬಸವ ಶಿವಾಚಾರ್ಯರು ಹೃದಯಾಘಾತದಿಂದ ಲಿಂಗೈಕ್ಯರಾದ ಹಿನ್ನೆಲೆ ಮಠದ ಉತ್ತರಾಧಿಕಾರಿಯಾಗಿ ನೀಲಕಂಠ ಸ್ವಾಮೀಜಿಯನ್ನು ನೇಮಕಮಾಡಲಾಗಿದೆ. ಅವರು ಉತ್ತರಾಧಿಕಾರಿಯೇ ಹೊರತು ಪೀಠಾಧಿಪತಿಗಳಲ್ಲ ಎಂದು ಮಠದ ಹೊಣೆಗಾರಿಕೆ ವಹಿಸಿಕೊಂಡಿರುವ ಹೊನ್ನಕಿರಣಗಿ ಮಠದ ಚಂದ್ರಗುಂಡ ಶಿವಾಚಾರ್ಯರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಳಗಿ ಶ್ರೀಮಠವು ಉತ್ತರ ವರ್ಗದ ಮಠವಾಗಿರುವುದರಿಂದ ಶ್ರೀಮಠದ ವಂಶಜರನ್ನೇ ಉತ್ತರಾಧಿಕಾರಿಯಾಗಿ ನೇಮಕ ಮಾಡಿಕೊಂಡು ಬರುತ್ತಿರುವುದು ಪರಂಪರೆ. ಹೀಗಾಗಿ ಐದು ವರ್ಷದ ಬಾಲಕ ಶ್ರೀ ನೀಲಕಂಠ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿಯಾಗಿ ಸೂಚಿಸಲಾಗಿದೆಯೇ ಹೊರತು ಪೀಠಾಧಿಪತಿಗಳಾಗಿ ನೇಮಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ನೇಮಕಗೊಂಡ ಉತ್ತರಾಧಿಕಾರಿಗಳೆಲ್ಲರನ್ನೂ ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದರ್ಥವಲ್ಲ. ಅವರಿಗೆ ವೈದಿಕ ಸಂಸ್ಕೃತಿ ಹಾಗೂ ಸಂಸ್ಕಾರ ನೀಡಿ ಯೋಗ್ಯ ಸನ್ಯಾಸಿಯಾಗಿ ತಯಾರು ಮಾಡಿದ ನಂತರ ಎಲ್ಲ ಅರ್ಹತೆಗಳು ಇರುವುದನ್ನು ಖಚಿತಪಡಿಸಿಕೊಂಡು ನಂತರ ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದು ತಿಳಿಸಿದರು.
ಸದ್ಯಕ್ಕೆ ನೇಮಕ ಮಾಡಿರುವ ಉತ್ತರಾಧಿಕಾರಿ ಐದು ವರ್ಷದ ಬಾಲಕನಾಗಿರುವುದರಿಂದ ಸಂಸ್ಕಾರ ನೀಡುವುದು ಸೂಕ್ತ. ಪಂಚ ಶಿವಾಚಾರ್ಯರ ಸಮ್ಮತಿ ಮೇರೆಗೆ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆದರೆ, ನೇಮಕಗೊಂಡ ಉತ್ತರಾಧಿಕಾರಿ ಶ್ರೀ ನೀಲಕಂಠರನ್ನು ಮಾಧ್ಯಮಗಳಲ್ಲಿ ಮಠಾಧಿಪತಿಗಳು ಎಂದು ಪದ ಪ್ರಯೋಗ ಮಾಡಲಾಗಿದೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಮಾಧ್ಯಮದಲ್ಲಿ ಬಿತ್ತರವಾಗಿರುವ ಸುದ್ದಿಗಳು ವಾಸ್ತವಕ್ಕೆ ದೂರವಾಗಿದೆ. ಮುಂಬರುವ ದಿನಗಳಲ್ಲಿ ನೀಲಕಂಠ ಸ್ವಾಮಿ ಅವರನ್ನು ಯೋಗ್ಯ ಸನ್ಯಾಸಿಯಾಗಿ ತಯಾರು ಮಾಡಿದ ಬಳಿಕ ಮಾತ್ರ ಮಠದ ಪೀಠಾಧಿಪತಿಯಾಗಿ ನೇಮಕ ಮಾಡಲಾಗುವುದು ಎಂದು ಸ್ಪಷ್ಟೀಕರಣ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.