ಕಲಬುರಗಿ : ಎಂಬಿಎ ಪದವಿ ಪಡೆದಿರುವ ಸಂಗಮೇಶ್ ಪರಿಸರದ ಮೇಲಿರುವ ಅಪಾರ ಪ್ರೀತಿ, ಕಾಳಜಿಯಿಂದ ಸ್ವಯಂ ಉದ್ಯೋಗ ಆರಂಭಿಸಿ ಸ್ವಂತ ಬದುಕು ಕಟ್ಟಿಕೊಳ್ಳುವುದಲ್ಲದೇ ಇತರೆ ಹತ್ತಾರು ಜನರ ಜೀವನಕ್ಕೂ ಆಸರೆ ಆಗಿದ್ದಾರೆ. ಉದ್ಯೋಗ ಸೃಷ್ಟಿಸಿ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಗೃಹಿಣಿಯರಿಗೆ ನೆರವಾಗಿದ್ದಾರೆ.
ಹೆಚ್ಚು ಆದಾಯ ನಿರೀಕ್ಷಿಸದ ಸಂಗಮೇಶ್ : ಹೆಚ್ಚು ಆದಾಯ ನಿರೀಕ್ಷೆ ಮಾಡದ ಸಂಗಮೇಶ್, ಕಡಿಮೆ ದರದಲ್ಲಿ ಪರಿಸರ ಸ್ನೇಹಿ ಗಣೇಶ್ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಪಿಒಪಿ ಗಣೇಶ್ ಮೂರ್ತಿಗಳಿಗೆ 100 ರೂ. ದರ ಇದ್ರೆ, ಸಂಗಮೇಶ್ ಅವರು ಕೇವಲ 40 ರೂಪಾಯಿ ದರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಗಣೇಶ ಮೂರ್ತಿ ಅಷ್ಟೇ ಅಲ್ಲ, ಮಣ್ಣಿನ ಅಡುಗೆ ಪಾತ್ರೆಗಳು, ಅಲಂಕಾರಿಕ ಉಪಕರಣಗಳನ್ನು ಸಹ ಮಾರಾಟ ಮಾಡುತ್ತಿದ್ದಾರೆ.
ಜೇಡಿ ಮಣ್ಣನ್ನು ಬಳಸಿ ಗಣಪ ತಯಾರಿಕೆ : ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನ ಹತ್ತಿರ ಯಂಕವ್ವ ಮಾರ್ಕೇಟ್ನಲ್ಲಿ ಅಂಗಡಿ ತೆರೆದಿದ್ದು, ಮಣ್ಣಿನ ಗಣಪತಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಜೇಡಿ ಮಣ್ಣನ್ನು ಬಳಸಿ ಪರಿಸರ ಸ್ನೇಹಿ ಗಣಪಗಳನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾರಾಟ ಮಾಡುತ್ತಿದ್ದಾರೆ. ಆದಾಯ ನಿರೀಕ್ಷಿಸದೇ ಪರಿಸರ ರಕ್ಷಣೆಗಾಗಿ ಶ್ರಮ ಪಡುತ್ತಿದ್ದಾರೆ.
ಇದನ್ನೂ ಓದಿ: 'ಸುಂದರ್ ಭಾರತ್': ಜೆಎಸ್ಡಬ್ಲ್ಯೂ ಪೇಂಟ್ಸ್ನಿಂದ ಒಲಿಂಪಿಕ್ ಕ್ರೀಡಾಪಟುಗಳ ಮನೆಗಳಿಗೆ ಉಚಿತ ಪೇಂಟಿಂಗ್
ಈಗಾಗಲೇ ಪರಿಸರ ಸ್ನೇಹಿ ಗಣೇಶನನ್ನು ಸಾವಿರಾರು ಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾದ ಸಂಗಮೇಶ್, ಈ ವರ್ಷ ಕೂಡ ಬುಕ್ಕಿಂಗ್ ಆರಂಭಿಸಿದ್ದಾರೆ. ಅಲ್ಲದೇ ಕಲಬುರಗಿ ಭಾಗದಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಲು ಹೇಳಿಕೊಳ್ಳುವಂತಹ ಕಂಪನಿಗಳಿಲ್ಲ.
ಹೀಗಾಗಿ, ಪರಿಸರ ಸಂರಕ್ಷಣೆ ಜೊತೆಗೆ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ಸಂಗಮೇಶ್ ಅವರು ಈ ಹೊಸ ಐಡಿಯಾಗೆ ಪ್ಲ್ಯಾನ್ ಮಾಡಿಕೊಂಡು ಮಣ್ಣಿನಿಂದ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದಾರೆ.
ಸುಮಾರು 30ಕ್ಕೂ ಹೆಚ್ಚು ಗೃಹಿಣಿಯರು ಸಂಗಮೇಶ್ ಅವರ ಬಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗಣೇಶ ಮೂರ್ತಿಗಳನ್ನು ತಮ್ಮ ಕೈಯಿಂದ ರೂಪಿಸುವ ಮಹಿಳೆಯರು, ಉದ್ಯೋಗದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ತಾವು ಸ್ವಂತ ಉದ್ಯಮ ಸೃಷ್ಟಿಸಿ ಬದುಕುವುದರ ಜೊತೆಗೆ ಹತ್ತಾರು ಜನರ ಜೀವನಕ್ಕೂ ಕೆಲಸ ಕೊಟ್ಟು ಆಸರೆಯಾಗಿದ್ದಾರೆ.