ಕಲಬುರಗಿ: ರಾಷ್ಟ್ರ - ರಾಜ್ಯ ರಾಜಧಾನಿಯಲ್ಲಿರುವ ದೇಶದ ಬೃಹತ್ ಹಾಗೂ ಪ್ರತಿಷ್ಠಿತ ಆರೋಗ್ಯ ಸಂಸ್ಥೆ ಏಮ್ಸ್ ಅನ್ನು ಕಲ್ಯಾಣ - ಕರ್ನಾಟಕ ಭಾಗದ ಕಲಬುರಗಿಯಲ್ಲಿ ಸ್ಥಾಪಿಸುವ ಆಶ್ವಾಸನೆ ಕೊಟ್ಟಿದ್ದ ಕೇಂದ್ರ ಸರ್ಕಾರ, ಈ ಭಾಗದ ಜನರಿಗೆ ತಣ್ಣೀರೆರಚಿದೆ. ಏಮ್ಸ್ ಕೈತಪ್ಪಿದ್ದಕ್ಕೆ ಆಕ್ರೋಶ ಭುಗಿಲೆದ್ದಿದ್ದು, ನಮ್ಮ ಭಾಗದ ವಿರುದ್ಧ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂದರೆ ಏಮ್ಸ್ ಆಸ್ಪತ್ರೆಯನ್ನು ದೇಶದ ಕೆಲವೇ ಭಾಗಗಳಲ್ಲಿ ನಿರ್ಮಿಸಲಾಗಿದೆ. ಕಲ್ಯಾಣ ಕರ್ನಾಟಕದ ಹಿಂದುಳಿದ ಭಾಗದವರಿಗೆ ಏಮ್ಸ್ ಸೌಲಭ್ಯ ಮತ್ತು ಸೇವೆಗಳು ದೊರೆಯಲಿ ಎಂಬ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಮತ್ತು 2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇಷ್ಟಾದರೂ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಜೊತೆಗೆ ಕಲಬುರಗಿಗೆ ಕೊಡುವ ವಿಚಾರವನ್ನೂ ಅಲ್ಲಗಳೆದಿದೆ.
ಇದನ್ನೂ ಓದಿ...ಬೆದರಿಕೆ ಕರೆಗಳು ನಮ್ಮ ವಿಚಾರಗಳ ಮೌಲ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ: ಪ್ರಿಯಾಂಕ್ ಖರ್ಗೆ
ದೇಶದಲ್ಲಿ ಅತಿ ದೊಡ್ಡದಾದ ಹಾಗೂ 1,300 ಕೋಟಿ ರೂಪಾಯಿ ವೆಚ್ಚದ ಕಲಬುರಗಿಯ ಇಎಸ್‌ಐಸಿ ಆಸ್ಪತ್ರೆಯಲ್ಲಿ ಏಮ್ಸ್ ಸ್ಥಾಪಿಸಲು ಸಿಎಂ ಮತ್ತು ಮಾಜಿ ಸಿಎಂ ಜೊತೆಗೆ 2018ರಲ್ಲಿ ಸಂಸದೀಯ ಲೆಕ್ಕ ಸಮಿತಿ ಮತ್ತು ಡಾ.ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣೆ ಉನ್ನತಾಧಿಕಾರಿ ಸಮಿತಿಯೂ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೂ ಕೇಂದ್ರ ಸರ್ಕಾರ ತನ್ನ ನಿಲುವು ಬದಲಿಸಿದೆ. ಆಸ್ಪತ್ರೆ ನಿರ್ಮಾಣ ಸಂಬಂಧ ಕರ್ನಾಟಕ ಸರ್ಕಾರವೂ ಈಗಾಗಲೇ ಹುಬ್ಬಳ್ಳಿ - ಧಾರವಾಡದ ಹೆಸರನ್ನು ಸೂಚಿಸಿತ್ತು. ಅದಕ್ಕಾಗಿ ಕೇಂದ್ರದ ತಂಡ ಕೂಡಾ ಸ್ಥಳ ಪರಿಶೀಲನೆ ನಡೆಸಿದೆ.
ರಾಜ್ಯ ಮತ್ತು ಕೇಂದ್ರದ ನಿರ್ಧಾರ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಣ, ಉದ್ಯೋಗ ಸೇರಿದಂತೆ ಮೂಲಸೌಕರ್ಯಗಳ ಕೊರತೆ ನೀಗಿಸಬೇಕು ಎಂಬುದು ಕಲ್ಯಾಣ ಕರ್ನಾಟಕ ಭಾಗದ ಜನರ ಆಶಯವಾಗಿದೆ. ಆದರೆ, ದೂರದೃಷ್ಟಿಯುಳ್ಳ ಕಾರ್ಯಕ್ರಮಗಳು ರೂಪುಗೊಳ್ಳಬೇಕು ಎನ್ನುವುದು ಈಗಲೂ ಕನಸಾಗಿಯೇ ಉಳಿದಿದೆ. ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಹಾಗೂ ಕಲ್ಯಾಣ ಕರ್ನಾಟಕ ಎಂದು ಬದಲಾದ ನಂತರ ಮೇಲಿಂದ ಮೇಲೆ ಈ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಭಾಗದ ಜನಪ್ರತಿನಿಧಿಗಳು ಹಾಗೂ ಬಿಜೆಪಿ ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿರುವುದು ಈ ಭಾಗ ಮತ್ತಷ್ಟು ಹಿಂದುಳಿಯಲು ಕಾರಣವಾಗಿದೆ.