ಧಾರವಾಡ: ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ಯುವಕ ಶಿವಕುಮಾರ ಉಪ್ಪಾರ ಅವರ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಶ್ರೀರಾಮಸೇನಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಗೋಮಾತೆ ರಕ್ಷಣೆಗೆ ಶಿವಕುಮಾರ ಉಪ್ಪಾರ ತನ್ನ ಜೀವ ಬಲಿಕೊಟ್ಟಿದ್ದಾನೆ. ಆದರೆ, ಅವರ ಸಾವನ್ನು ಆತ್ಮಹತ್ಯೆ ಎಂದು ಪರಿಗಣಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿ ಸಲಾಗುತ್ತಿದೆ ಎಂದು ದೂರಿದ್ದಾರೆ.
ಯುವಕ ಮಾತನಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಲ್ಲಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಈ ವಿಷಯವಾಗೇ ನಮ್ಮ ಕುಟುಂಬ ಹೆದರಿದೆ ಎಂದು ತಿಳಿಸಿದ್ದಾರೆ. ಆದರೆ, ಪೊಲೀಸ್ ಇಲಾಖೆ ಸರಿಯಾದ ಭದ್ರತೆ ನೀಡುತ್ತಿಲ್ಲ. ಅಷ್ಟೇ ಏಕೆ ಆತನ ಸಾವನ್ನು ಆತ್ಮಹತ್ಯೆ ಎಂದು ತಿರುಚಲಾಗುತ್ತಿದೆ ಎಂದು ಶ್ರೀ ರಾಮ ಸೇನೆ ಆರೋಪಿಸಿದೆ.
ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಸಂಶಯ ಇದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ನೀಡಿ ಯುವಕನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.