ಧಾರವಾಡ: ತಾಲೂಕಿನ ಲಕಮಾಪುರ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಖಾಯಂ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಲಕಮಾಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಸಕಲ ವಾದ್ಯ ಮೇಳಗಳೊಂದಿಗೆ ಪ್ರತಿಭಟನಾ ಮೆರವಣಿಗೆ ಮಾಡುತ್ತಾ ಬಂದ ಗ್ರಾಮಸ್ಥರು, ಜಿಲ್ಲಾಧಿಕಾರಿ ಕಚೇರಿ ಎದುರು ಕುಳಿತು ಪ್ರತಿಭಟಿಸಿದರು. ಲಕಮಾಪುರ ಗ್ರಾಮದ ಸರ್ವೆ ನಂಬರ್ 5 ರಲ್ಲಿ ಅನಾದಿ ಕಾಲದಿಂದಲೂ ಶವ ಸಂಸ್ಕಾರ ಮಾಡುತ್ತಾ ಬರಲಾಗಿದೆ. ಆದರೆ, ಈ ಸರ್ವೆ ನಂಬರ್ನಲ್ಲಿ ಬರುವ ಜಾಗವನ್ನು ಗ್ರಾಮದಲ್ಲಿ ಪರಬಾರೆ ಮಾಡಲು ತಯಾರಿ ನಡೆಸಿದ್ದು, ಗಮನಕ್ಕೆ ಬಂದಿದೆ. ಹೀಗೆ ಪರಬಾರೆ ಮಾಡಿದರೆ ನಮ್ಮ ಸಮುದಾಯದ ಜನರು ಮೃತಪಟ್ಟರೆ ಶವ ಸಂಸ್ಕಾರ ಮಾಡಲು ಅಡ್ಡಿಪಡಿಸಬಹುದು. ಹೀಗಾಗಿ ಜಮೀನು ಪರಬಾರೆ ಮಾಡಲು ಅನುಮತಿ ನೀಡಬಾರದು. ಒಂದು ವೇಳೆ ಅವರಿಗೆ ಅನುಮತಿ ನೀಡಿದ್ದೇ ಆದಲ್ಲಿ ನಾವುಗಳು ರಸ್ತೆ ಬದಿ ಶವ ಸಂಸ್ಕಾರ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಈ ಸುದ್ದಿಯನ್ನೂ ಓದಿ: ಅಧಿಕಾರಿಗಳೇ ಇದೇನಾ ನಿಮ್ಮ ಕಾರ್ಯವೈಖರಿ ?
15 ದಿನದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಲಕಮಾಪುರ ಗ್ರಾಮಕ್ಕೆ ಖಾಯಂ ರುದ್ರಭೂಮಿ ನೀಡಲು 1994 ರಿಂದ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಡಿಸಿ ಕಚೇರಿ ಎದುರೇ ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.