ಧಾರವಾಡ: ಇಬ್ಬರು ಮಹಿಳೆಯರ ಮೇಲೆ ಕಾಡುಪ್ರಾಣಿ ದಾಳಿ - Leopard Era again in Dharwad
ಜಿಲ್ಲೆಯ ಕವಲಗೇರಿ ಹಾಗೂ ಗೋವನಕೊಪ್ಪ ಗ್ರಾಮದ ಕಾರ್ಮಿಕ ಮಹಿಳೆಯರಾದ ಬಸವಣ್ಣೆವ್ವ ಕುಲಕರ್ಣಿ ಹಾಗೂ ಮಂಜುಳಾ ತೋಟಗೇರ ಎಂಬುವರು ಕಾಡು ಪ್ರಾಣಿಯೊಂದರ ದಾಳಿಯಿಂದ ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
![ಧಾರವಾಡ: ಇಬ್ಬರು ಮಹಿಳೆಯರ ಮೇಲೆ ಕಾಡುಪ್ರಾಣಿ ದಾಳಿ leopard-attacks](https://etvbharatimages.akamaized.net/etvbharat/prod-images/768-512-14330222-thumbnail-3x2-ddd.jpg?imwidth=3840)
ಧಾರವಾಡ: ಇಬ್ಬರು ಮಹಿಳೆಯರ ಮೇಲೆ ಕಾಡು ಪ್ರಾಣಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಕವಲಗೇರಿ ಹಾಗೂ ಗೋವನಕೊಪ್ಪ ಗ್ರಾಮದಲ್ಲಿ ಇಂದು ನಡೆದಿದೆ.
ಜಿಲ್ಲೆಯ ಕವಲಗೇರಿ ಹಾಗೂ ಗೋವನಕೊಪ್ಪ ಗ್ರಾಮದ ಕಾರ್ಮಿಕ ಮಹಿಳೆಯರಾದ ಬಸವಣ್ಣೆವ್ವ ಕುಲಕರ್ಣಿ ಹಾಗೂ ಮಂಜುಳಾ ತೋಟಗೇರ ಕಾಡು ಪ್ರಾಣಿ ದಾಳಿಯಿಂದ ಗಾಯಗೊಂಡವರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಇಬ್ಬರು ಮಹಿಳೆಯರು ಜಮೀನಿನಿಂದ ವಾಪಸಾಗುತ್ತಿದ್ದ ವೇಳೆ ಏಕಾಏಕಿ ಕಾಡುಪ್ರಾಣಿ ದಾಳಿ ಮಾಡಿ ಗಾಯಗೊಳಿಸಿದೆ. ವಿಷಯ ತಿಳಿದ ಶಾಸಕ ಅಮೃತ ದೇಸಾಯಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಬಳಿಕ ದಾಳಿ ಮಾಡಿದ ಪ್ರಾಣಿಯನ್ನು ಗುರುತಿಸಿ ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕಾರಿಯಿಂದ ಸ್ಪಷ್ಟನೆ: ತಾಲೂಕಿನ ಗೋವನಕೊಪ್ಪ ಮತ್ತು ದಂಡಿಕೊಪ್ಪ ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ ಇಬ್ಬರು ಮಹಿಳೆಯರ ಮೇಲೆ ಕಾಡುಪ್ರಾಣಿಯೊಂದು ದಾಳಿ ಮಾಡಿದ ಕುರಿತು ವರದಿಯಾಗಿದೆ. ಸಾರ್ವಜನಿಕ ದೂರಿನ ಮೇಲೆ ಅಗತ್ಯ ಕ್ರಮವಹಿಸಲಾಗಿದೆ.
ಇಂದು ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತಂಡಗಳು ಕಾರ್ಯಾಚರಣೆ ಕೈಗೊಳ್ಳಲಿವೆ. ಧಾರವಾಡ ಗ್ರಾಮೀಣ ಶಾಸಕರೊಂದಿಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅವರಿಂದ ದಾಳಿ ಮಾಡಿರುವ ಕಾಡು ಪ್ರಾಣಿ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.
ಕೆಲವರು ದಾಳಿ ಮಾಡಿರುವ ಪ್ರಾಣಿ ಚಿರತೆ ಎಂದು ಅಪಪ್ರಚಾರ ಮಾಡುತ್ತಿದ್ದು, ಅದು ಚಿರತೆ ಅಥವಾ ತೋಳ ಅಥವಾ ಮತ್ಯಾವುದೋ ಕಾಡುಪ್ರಾಣಿ ಎಂಬುದು ಕಾರ್ಯಾಚರಣೆ ನಂತರ ಖಚಿತವಾಗಲಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಅಗತ್ಯ ಸಿಬ್ಬಂದಿ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಇಂದು ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಲಾಗುವುದು. ಆದ್ದರಿಂದ ಖಚಿತಪಡಿಸಿಕೊಳ್ಳದೆ ಚಿರತೆ ಎಂದು ಸುಳ್ಳು ಸುದ್ದಿಯನ್ನು ಯಾರು ಪ್ರಸಾರ ಮಾಡಬಾರದು ಮತ್ತು ಸಾರ್ವಜನಿಕರು ನಂಬಬಾರದು ಎಂದು ಮನವಿ ಮಾಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ