ಧಾರವಾಡ: ಸಂಭ್ರಮ-ಸಡಗರದಿಂದ ಕನ್ನಡ ರಾಜ್ಯೋತ್ಸವ ಆಚರಣೆ - dharwad
ಧಾರವಾಡ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಜಿಲ್ಲೆಯಲ್ಲಿ ಸಡಗರದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಧಾರವಾಡ: 66ನೇ ಕನ್ನಡ ರಾಜ್ಯೋತ್ಸವವನ್ನು ಧಾರವಾಡದಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲಾಯಿತು.
ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಭುವನೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿವಿಧ ದಳಗಳಿಂದ ಗೌರವ ವಂದನೆ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಕಳೆದ ಒಂದು ವಾರದಿಂದ 'ಕನ್ನಡಕ್ಕಾಗಿ ನಾವು' ಎಂಬ ಶೀರ್ಷಿಕೆಯಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲಾ ಕಡೆ ಆಯೋಜನೆ ಮಾಡಲಾಗಿದೆ. ಅಕ್ಟೋಬರ್ 28 ರಂದು ಲಕ್ಷಾಂತರ ಕಂಠಗಳಲ್ಲಿ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆ ಸಾರುವ ಗೀತೆಗಳನ್ನು ಹಾಡಿ ದಾಖಲೆ ನಿರ್ಮಿಸಿರುವುದು ನಮ್ಮ ನಾಡು, ನುಡಿ ಅಭಿಮಾನದ ಧ್ಯೋತಕವಾಗಿದೆ ಎಂದರು.
ಇದೇ ವೇಳೆ ಕರ್ನಾಟಕ ಏಕೀಕರಣಕ್ಕೆ ಒತ್ತಾಯಿಸಿ ಹುಬ್ಬಳ್ಳಿ ಸಮೀಪದ ಅದರಗುಂಚಿ ಗ್ರಾಮದಲ್ಲಿ ಅಂದಿನ ನೇತಾರರಾಗಿದ್ದ ಅದರಗುಂಚಿ ಶಂಕರಗೌಡ ಪಾಟೀಲರು 23 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ಘಟನೆಯನ್ನು ಮೆಲುಕು ಹಾಕಿದರು.