ಹುಬ್ಬಳ್ಳಿ: ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ರೈತರ ಬೆಳೆಗಳಿಗೆ ಹಾನಿಯುಂಟಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಚಿಗುರುವ ಮುನ್ನವೇ ಮಳೆಯ ಹೊಡೆತಕ್ಕೆ ಹಾನಿಯಾಗಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿದೆ.
![crop loss due to continuous rainfall](https://etvbharatimages.akamaized.net/etvbharat/prod-images/kn-hbl-02-belegalu-jalavrutha-raitha-kangalu-av-ka10025_06082020132321_0608f_1596700401_266.jpg)
ಧಾರವಾಡ ಜಿಲ್ಲೆಯಾದ್ಯಂತ ಹಗಲು-ರಾತ್ರಿ ಸುರಿಯುತ್ತಿರುವ ಮಳೆಯಿಂದ ಎಲ್ಲೆಡೆ ನೀರಿನ ಹರಿವು ಹೆಚ್ಚತೊಡಗಿದೆ. ಹುಬ್ಬಳ್ಳಿ, ಕುಂದಗೋಳ ಹಾಗೂ ಕಲಘಟಗಿ ತಾಲೂಕಿನ ವ್ಯಾಪ್ತಿಯ ನಾಲೆಗಳು ಹಾಗೂ ಹಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ.
![crop loss due to continuous rainfall](https://etvbharatimages.akamaized.net/etvbharat/prod-images/kn-hbl-02-belegalu-jalavrutha-raitha-kangalu-av-ka10025_06082020132321_0608f_1596700401_1107.jpg)
ಈ ವರ್ಷದ ಮುಂಗಾರು ಆರಂಭಕ್ಕೆ ಕೆಲದಿನಗಳ ವಿಳಂಬವಾಗಿತ್ತು. ನಂತರ ಉತ್ತಮ ಮಳೆ ಸುರಿದರೂ ತಾಲೂಕಿನ ರೈತರು ಮಳೆಯ ವಿಳಂಬದಿಂದಾಗಿ ಬೆಳೆಗಳ ಬಿತ್ತನೆ ಕಾರ್ಯವನ್ನು ಮುಂದೂಡಿದ್ದರು. ಸೋಯಾ ಸೇರಿದಂತೆ ಇನ್ನಿತರ ಬೀಜಗಳನ್ನು ಬಿತ್ತನೆ ಮಾಡಿದರು. ನಂತರದ ದಿನಗಳಲ್ಲಿ ಮಳೆ ತನ್ನ ಆರ್ಭಟವನ್ನು ತೋರುತ್ತಿರುವ ಪರಿಣಾಮ ಹೊಲಗದ್ದೆಗಳು ಜಲಾವೃತಗೊಂಡು ಬೆಳೆ ಹಾನಿಗೆ ಕಾರಣವಾಗಿದೆ.
ಜನ, ಜಾನುವಾರುಗಳಿಗೂ ತೊಂದರೆ...
![crop loss due to continuous rainfall](https://etvbharatimages.akamaized.net/etvbharat/prod-images/kn-hbl-02-belegalu-jalavrutha-raitha-kangalu-av-ka10025_06082020132321_0608f_1596700401_196.jpg)
ಅವಿರತವಾಗಿ ಸುರಿಯುತ್ತಿರುವ ಮಳೆ ಕೇವಲ ರೈತರನ್ನಷ್ಟೇ ಅಲ್ಲದೆ, ತಾಲೂಕಿನ ನಾಗರಿಕರನ್ನೂ ಹೈರಾಣಾಗಿಸಿದೆ. ಸತತ ಮಳೆ ಸುರಿಯುತ್ತಿರುವ ಕಾರಣ ಕೆಲ ಗ್ರಾಮೀಣ ಭಾಗದ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರೆ, ಮತ್ತೆ ಕೆಲ ಪ್ರದೇಶಗಳು ನಡುಗಡ್ಡೆಗಳಾಗಿ ಮಾರ್ಪಟ್ಟಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರೈತರು ಮತ್ತಷ್ಟು ತೊಂದರೆಗೊಳಗಾಗುವ ಸಾಧ್ಯತೆ ಇದೆ.