ಬೆಂಗಳೂರು/ಧಾರವಾಡ: ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪ್ರವಾಹ ಹಾಗೂ ಅತಿವೃಷ್ಠಿಯಿಂದ ಬೆಳೆ ಹಾನಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚುವರಿಯಾಗಿ ಪರಿಹಾರ ಹಣ ಘೋಷಣೆ ಮಾಡಿದ್ದರು. ಅದರಂತೆ ಇದೀಗ ಹೆಚ್ಚುವರಿಯಾಗಿ ರೂ. 1,135.49 ಕೋಟಿ ರೂ. ಬಿಡುಗಡೆಯಾಗಿದೆ.
18.02 ಲಕ್ಷ ರೈತರ ಬ್ಯಾಂಕ್ ಖಾತೆಗೆ ಈಗಾಗಲೇ ಒಟ್ಟು 1,252.89 ಕೋಟಿ ರೂ. ಹಣ ನೇರವಾಗಿ ಜಮೆಯಾಗಿದ್ದು, ಇದುವರೆಗೆ ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ 2,388.39 ಕೋಟಿ ರೂ. ಪರಿಹಾರ ನೀಡಿದಂತಾಗಿದೆ.
ಧಾರವಾಡ ಜಿಲ್ಲೆಯ ರೈತರಿಗೆ 96, 33 ಕೋಟಿ ರೂ ಪರಿಹಾರ: ಜಿಲ್ಲೆಯ 1,21,135 ರೈತರಿಗೆ ಸರ್ಕಾರದಿಂದ ರೂ. 96,33 ಕೋಟಿ ಪರಿಹಾರ ನೇರವಾಗಿ ರೈತರ ಖಾತೆಗೆ ಜಮೆ ಆಗಿದೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಜುಲೈ ಮತ್ತು ನವೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ವಿವಿಧ ಕೃಷಿ, ತೋಟಗಾರಿಕೆ ಬೆಳೆಗಳ ಹಾನಿಯ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ದಿನಂಪ್ರತಿ ದಾಖಲಿಸಲಾಗಿದ್ದು, 1,21,135 ರೈತರಿಗೆ ಸರ್ಕಾರದಿಂದ 96,33 ಕೋಟಿ ರೂ. ಪರಿಹಾರ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜನವರಿ ಜಮಾ ಮಾಡಲಾಗಿದೆ ಎಂದು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸದ್ಯ ಸರ್ಕಾರವು ಘೋಷಿಸಿರುವಂತೆ ಬೆಳೆ ಹಾನಿಯಾದ ರೈತರಿಗೆ ಹೆಚ್ಚುವರಿಯಾಗಿ ಪರಿಹಾರ ಮೊತ್ತ 96.11 ಕೋಟಿ ರೂ. ಡಿಸೆಂಬರ್ ತಿಂಗಳಲ್ಲಿ ಆರ್ಟಿಜಿಎಸ್ ಮೂಲಕ ನೇರವಾಗಿ ರೈತರ ಉಳಿತಾಯ ಖಾತೆಗೆ ಜಮಾ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು ಮೊತ್ತ 192.43 ಕೋಟಿ ರೂ. ಜಮಾವಣೆಗೊಂಡಿದ್ದು, ಹೆಚ್ಚುವರಿ ಹಣ ಸಹ ಜಮಾವಣೆಯಾಗಲಿದೆ ಎಂದರು.