ದಾವಣಗೆರೆ : ಟೈಯರ್ಗೆ ಗಾಳಿ ತುಂಬಿಸುವ ವೇಳೆ ಟೈಯರ್ ಸ್ಫೋಟಗೊಂಡು ಯುವಕನ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕುರಬರಹಳ್ಳಿಯಲ್ಲಿ ನಡೆದಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ನಿವಾಸಿ ಮಾರುತಿ (28) ಸಾವನ್ನಪ್ಪಿದ ಯುವಕ. ಟೈಯರ್ ಸ್ಫೋಟದ ಭೀಕರತೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಎರಡ್ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜೆಸಿಬಿಯ ಟೈಯರ್ಗೆ ಹವಾ(ಗಾಳಿ) ತುಂಬಿಸುವಾಗ ಅದು ಹೆಚ್ಚಾಗಿ ಟೈಯರ್ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಟೈಯರ್ಗೆ ಗಾಳಿ ತುಂಬಿಸುತ್ತಿದ್ದಾಗ ಸ್ಫೋಟಗೊಂಡ ಕಾರಣ ಯುವಕ ಮಾರುತಿ ಮೇಲೆ ಹಾರಿ ಕೆಳಕ್ಕೆ ಬಿದ್ದಾಗ ಕಾಲು, ಪಕ್ಕೆಲುಬು ಮತ್ತು ಎದೆಗೆ ಪಟ್ಟಾಗಿತ್ತು. ಕೂಡಲೇ ಅವರನ್ನು ದಾವಣಗೆರೆಯ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಾರುತಿ ಹರಪನಹಳ್ಳಿ ತಾಲೂಕಿನ ಶ್ಯಾಮನೂರು ಒಡೆತನದ ದುಗ್ಗಾವತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ತಿಂಗಳು 3ರಂದು ಜೆಸಿಬಿ ಮತ್ತು ಅಗ್ನಿ ಶಾಮಕ ವಾಹನದ 3 ಟೈಯರ್ಗಳಿಗೆ ಪಂಕ್ಚರ್ ಹಾಕಿಸಲು ಮಾರುತಿ ಮತ್ತು ಕುಬೇರ ಎಂಬುವರು ಕುರಬರಹಳ್ಳಿ ಗ್ರಾಮದ ಸಂದೀಪ್ ಮತ್ತು ಪರಮೇಶ್ವರಪ್ಪ ಅವರ ಪಂಕ್ಚರ್ ಅಂಗಡಿಗೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: ವಿಜಯನಗರ : ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಸ್ನೇಹಿತನ ಕೊಲೆ