ದಾವಣಗೆರೆ : ರೀ ಡಿಸಿ, ಎಸ್ಪಿ ನೀವೇನ್ ಮಾಡ್ತಿದ್ದೀರಿ, ಏನಾದ್ರೂ ಹೆಚ್ಚು ಕಡಿಮೆಯಾದ್ರೇ ನಿಮ್ಮನ್ನೇ ಗುರಿಯಾಗಿಸಿಕೊಳ್ಳುತ್ತೇನೆ ಎಂದು ಸಚಿವ ಬೈರತಿ ಬಸವರಾಜ್ ಅವರು ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ದಾವಣಗೆರೆಯಲ್ಲಿ ಹೆಚ್ಚಾಗುತ್ತಿದ್ದಂತೆ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಪೂರ್ವಭಾವಿ ಸಭೆಯಲ್ಲಿ ಸಚಿವರು ಅಧಿಕಾರಿಗಳ ವಿರುದ್ಧ ಕೆರಳಿದರು.
ಸರ್ಕಾರ ನಿಗದಿಪಡಿಸಿರುವ ವ್ಯಾಕ್ಸಿನ್ ಹಾಕುವ ಗುರಿಯನ್ನು ಜಿಲ್ಲಾಡಳಿತ ಮುಟ್ಟದೆ ಇರುವ ಬೆನ್ನಲ್ಲೇ ಸಚಿವ ಬೈರತಿ ಬಸವರಾಜ್ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಾಲೂಕುವಾರು ಹಾಕಿರುವ ಲಸಿಕೆಯ ಅಂಕಿ-ಅಂಶಗಳ ನೀಡುವಂತೆ ಸಚಿವರು ತಿಳಿಸಿದರು. ಆದ್ರೆ, ಅಧಿಕಾರಿಗಳು ಮಾಹಿತಿ ಇಲ್ಲದೆ ತಡವರಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಎಸ್ಪಿ ಜಿಲ್ಲೆಯಲ್ಲಿ ಏನ್ಮಾಡ್ತಿದ್ದಾರೋ ಅದೂ ಗೊತ್ತಿಲ್ಲ. ಇದರ ಬಗ್ಗೆ ಹೆಚ್ಚು ಕಾಳಜಿವಹಿಸಿಲ್ಲ ಎಂಬುದಾಗಿ ತಿಳಿಯುತ್ತಿದೆ ಎಂದು ಸಚಿವರು ಆಕ್ರೋಶ ಹೊರ ಹಾಕಿದರು. ಆಕ್ಸಿಜನ್ ಕೊರತೆ ಇದೆ ಅದನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ ಎಂದು ಸಚಿವರು ಕಿಡಿ ಕಿಡಿಯಾದರು.
ಆಗ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಧ್ಯೆಪ್ರವೇಶಿಸಿ, ಸರ್, ನಮ್ಮ ಬಳಿ ಆಕ್ಸಿಜನ್ ಸಮಸ್ಯೆ ಇಲ್ಲ. ಅದು ಯಾರು ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಆ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸುವೆ ಎಂದರು.