ದಾವಣಗೆರೆ: ದೀಪಾವಳಿ ಹಬ್ಬದ ದಿನವೇ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ದುರಂತ ಸಂಭವಿಸಿದ್ದು, ಹೊಳೆಯಲ್ಲಿ ಎತ್ತಿನ ಗಾಡಿ ಪಲ್ಟಿಯಾಗಿ ಎತ್ತುಗಳು ಹಾಗೂ ಅದರಲ್ಲಿದ್ದ ರೈತ ನೀರುಪಾಲಾಗಿದ್ದಾನೆ.
ರಮೇಶ ಕೋಲೆ ಹನುಮಣ್ಣಾ ನೀರುಪಾಲಾದ ರೈತ. ಹಬ್ಬದ ನಿಮಿತ್ತ ಎತ್ತು ಹಾಗೂ ಗಾಡಿ ತೊಳೆಯಲು ಗ್ರಾಮದ ಸಮೀಪದ ಹೊಳೆಗೆ ಹೋಗಿದ್ದರು. ಈ ವೇಳೆ ನೀರಿನ ರಭಸ ಹೆಚ್ಚಾಗಿ ಎತ್ತಿನ ಗಾಡಿ ಪಲ್ಟಿಯಾಗಿದೆ. ಎತ್ತುಗಳು ಹಾಗೂ ರಮೇಶ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಎತ್ತುಗಳನ್ನು ರಕ್ಷಿಸಲು ಮುಂದಾದರೂ ಮೂಕ ಪ್ರಾಣಿಗಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರಮೇಶ್ ಅವರ ದೇಹ ಪತ್ತೆಯಾಗಿಲ್ಲ.
ರಮೇಶ್ಗೆ ಈಜು ಬಾರದ ಕಾರಣ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಮೃತದೇಹಕ್ಕೆ ಹುಡುಕಾಟ ಮುಂದುವರಿಸಿದ್ದಾರೆ. ಈ ಸಂಬಂಧ ಹೊನ್ನಾಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗಷ್ಟೇ ಮಾರಿ ಪೂಜೆಯ ಕೋಣ ಯಾರಿಗೆ ಸೇರಬೇಕು ಎಂಬ ಬಗ್ಗೆ ಹಾರನಹಳ್ಳಿ ಗ್ರಾಮದ ಜೊತೆ ನಡೆದ ಗಲಾಟೆಯಲ್ಲಿ ಬೇಲಿಮಲ್ಲೂರು ಗ್ರಾಮದ ಹೆಸರು ಚರ್ಚೆಗೆ ಕಾರಣವಾಗಿತ್ತು. ಕೋಣ ಬಂದ ಹದಿನೈದು ದಿನಗಳೊಳಗಾಗಿ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಕಾಕತಾಳೀಯ ಎಂಬಂತೆ ಚರ್ಚೆಗೂ ಕಾರಣವಾಗಿದೆ.