ದಾವಣಗೆರೆ: ಈದ್ ಮಿಲಾದ್ ಹಾಗೂ ಪಾಲಿಕೆ ಚುನಾವಣೆ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ಅಧ್ಯಕ್ಷತೆಯಲ್ಲಿ ನಾಗರಿಕ ಸೌಹಾರ್ದ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಅತ್ಯಂತ ಶಾಂತಿಯುತವಾಗಿ ಈದ್ ಮಿಲಾದ್ ಹಬ್ಬ ಹಾಗೂ ಪಾಲಿಕೆ ಚುನಾವಣೆ ನಡೆಸಬೇಕು. ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಯಾರಾದರೂ ಒತ್ತಡ, ಬೆದರಿಕೆ, ಆಮಿಷ ನೀಡಿದರೆ ನನಗೆ ದೂರು ನೀಡಿ ಇಲ್ಲವೇ ಪೊಲೀಸ್ ಇಲಾಖೆಗೆ ತಿಳಿಸಿ. ಮತದಾರರಿಗೆ ತೊಂದರೆ ಕೊಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದರು.
ಎಸ್ಪಿ ಹನುಮಂತರಾಯ ಮಾತನಾಡಿ, ನವೆಂಬರ್ 12ರಂದು ಪಾಲಿಕೆ ಚುನಾವಣೆ ಹಾಗೂ 14ರಂದು ಎಣಿಕೆ ನಡೆಯಲಿದೆ. ಈ ಸಂದರ್ಭದಲ್ಲಿ ಯಾರೂ ಕಾನೂನು ಮೀರಿ ನಡೆಯಬಾರದು. ಅಯೋಧ್ಯೆಗೆ ಸಂಬಂಧಿಸಿದ ತೀರ್ಪು ಸಹಿತ ಹಲವು ಮಹತ್ವದ ತೀರ್ಪುಗಳು ಬರುವ ಸಾಧ್ಯತೆಗಳಿವೆ. ಆಗಲೂ ಯಾರೂ ಅಶಾಂತಿ ಸೃಷ್ಟಿಸಬಾರದು ಎಲ್ಲರೂ ಸಂಯಮ, ಶಾಂತಿಯಿಂದ ವರ್ತಿಸಬೇಕು ಎಂದು ಎಸ್ಪಿ ಸೂಚನೆ ನೀಡಿದ್ದಾರೆ.