ಬೆಂಗಳೂರು: ಜ.9ರಿಂದ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಸರ್ಕಾರದ ವಾರಾಂತ್ಯ ಕರ್ಫ್ಯೂ ದೊಡ್ಡಮಟ್ಟದ ಗೊಂದಲವಾಗಿ ಪರಿಣಮಿಸಿದೆ.
ಜನವರಿ 9ರಿಂದ 19ರವರೆಗೆ ಕನಕಪುರ ಮೇಕೆದಾಟುನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷ, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಮೂರನೇ ಅಲೆ ಆತಂಕ ಎದುರಾಗಿದ್ದು, ರಾಜ್ಯಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ತಂದಿದೆ. ಇದೀಗ ಮುಂದಿನ ಶುಕ್ರವಾರದಿಂದ ವಾರಾಂತ್ಯ ಕರ್ಫ್ಯೂ ಸಹ ಜಾರಿ ಮಾಡಿದೆ.
ಜನವರಿ 9 ಅಂದರೆ ಭಾನುವಾರದಂದು ಕನಕಪುರದ ಮೇಕೆದಾಟುನಿಂದ ಪಾದಯಾತ್ರೆ ಆರಂಭಿಸಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದ್ದು, ಮೊದಲ ದಿನದ ಕಾರ್ಯಕ್ರಮಕ್ಕೆ ವಾರಾಂತ್ಯ ಕರ್ಫ್ಯೂ ಅಡ್ಡಿಯಾಗಲಿದೆ. ಕಾಂಗ್ರೆಸ್ ಪಕ್ಷದ ನಾಯಕರು ಈಗಾಗಲೇ ಇಂದು ಸಭೆ ಸೇರಿ ಚರ್ಚಿಸಿದ್ದಾರೆ. ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಪಾದಯಾತ್ರೆ ನಿಲ್ಲಿಸಬಾರದು. ಬೇಕಾದರೆ ನಮ್ಮ ನಾಯಕರ ವಿರುದ್ಧ ಪ್ರಕರಣ ದಾಖಲಾಗಲಿ, ಜೈಲಿಗೆ ಬೇಕಾದರೂ ನಮ್ಮನ್ನ ಕಳುಹಿಸಲಿ. ಪಾದಯಾತ್ರೆ ಮಾತ್ರ ನಿಲ್ಲಿಸಬಾರದು ಎಂದು ದೃಢ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರ ತಮ್ಮ ಪಾದಯಾತ್ರೆಯನ್ನು ತಡೆಯುವ ಸಲುವಾಗಿ ಯಾವುದೇ ರೀತಿಯ ಪ್ರಯತ್ನವನ್ನಾದರೂ ಮಾಡಬಹುದು. ಲಾಕ್ಡೌನ್ ಜಾರಿಗೆ ತಂದರು ಅಚ್ಚರಿಯಿಲ್ಲ ಎಂಬ ಮಾತುಗಳನ್ನು ಈಗಾಗಲೆ ಹೇಳಿದ್ದರು. ಪ್ರತಿಪಕ್ಷಗಳ ನಿರೀಕ್ಷೆಯಂತೆ ರಾಜ್ಯಸರ್ಕಾರ ಕೋವಿಡ್ ನೆಪವೊಡ್ಡಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದೆ. ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ಮುಂದಿನ ತೀರ್ಮಾನ ದತ್ತ ಕುತೂಹಲ ಮನೆಮಾಡಿದೆ.
ಭಾನುವಾರದಂತೆ ಯೋಜಿತ ಪಾದಯಾತ್ರೆ ಬಲವಂತವಾಗಿ ಚಾಲನೆ ಪಡೆಯುತ್ತದೆಯೋ ಅಥವಾ ಸೋಮವಾರ ಪಾದಯಾತ್ರೆ ಆರಂಭಿಸಿ ವಾರಾಂತ್ಯದಲ್ಲಿ ಪಾದಯಾತ್ರೆಗೆ ನೀಡುವ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಕೈಗೊಳ್ಳುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ. ಕೋವಿಡ್ ನಿಯಮಾವಳಿಗಳನ್ನು ದಿಕ್ಕರಿಸುವುದು ಸಹ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆಯಾಗಬಹುದು. ಸಾಕಷ್ಟು ವಿಧದ ಕಾನೂನು ತೊಡಕುಗಳು ಸಹ ಎದುರಾಗುವ ಸಾಧ್ಯತೆ ಇದೆ. ಹಳೆಯ ನಿಯಮಾವಳಿಗಳನ್ನು ಅನುಸರಿಸಿಯೇ ಪಾದಯಾತ್ರೆ ನಡೆಸುವ ಭರವಸೆ ನೀಡಿರುವ ಕಾಂಗ್ರೆಸ್ಗೆ ಸರ್ಕಾರ ಸಮ್ಮತಿ ನೀಡಿದೆ. ಆದರೆ ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಪಾದಯಾತ್ರೆ ನಡೆಸುವುದಕ್ಕೆ ಯಾವ ರೀತಿಯಲ್ಲೂ ಒಪ್ಪಿಗೆ ನೀಡಲು ಸಾಧ್ಯವಿಲ್ಲ. ಇದರಿಂದ ನಾಳೆ ಕಾಂಗ್ರೆಸ್ ರಾಜ್ಯ ನಾಯಕರು ಇನ್ನೊಂದು ಸುತ್ತಿನ ಸಭೆ ನಡೆಸಿ ಮುಂದಿನ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಮಾಲ್, ಸಿನಿಮಾ ಮಂದಿರಕ್ಕೆ ಶೇ.50ರಷ್ಟು ಮಿತಿ... ಸರ್ಕಾರದ ಕೈಗೊಂಡ ಕ್ರಮಗಳ ವಿವರ ಇಲ್ಲಿದೆ