ಬೆಂಗಳೂರು: ರಾಜ್ಯದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಇನ್ನೂ 19 ತಿಂಗಳು ಬಾಕಿ ಇರುವಾಗಲೇ ಜಾತಿ ಸಮೀಕರಣದ ಲೆಕ್ಕಾಚಾರದ ಮೇಲೆ ರಾಜಕೀಯ ಪಕ್ಷಗಳು ಕಣ್ಣಿಟ್ಟಿವೆ. ಅದರಲ್ಲೂ ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯದ ಮತಗಳಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪೈಪೋಟಿಗೆ ಇಳಿದಿವೆ.
ಸಿಂದಗಿ ಹಾಗೂ ಹಾನಗಲ್ ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಮೂಲಕವೇ ಜೆಡಿಎಸ್ ತನ್ನ ಕಾರ್ಯಾಚರಣೆಗೆ ಇಳಿದಿದೆ. ನಮ್ಮ ಪಕ್ಷದಿಂದ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುತ್ತೇವೆ ಎಂಬ ಸಂದೇಶ ರವಾನಿಸುವುದಕ್ಕಾಗಿಯೇ ಜೆಡಿಎಸ್ ಈ ತಂತ್ರ ರೂಪಿಸಿದ್ದು, ಮುಂದಿನ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ 25ಕ್ಕಿಂತ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಮೀಸಲು ಇಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿಯೇ ಪ್ರಕಟಿಸಿದ್ದಾರೆ.
ಎರಡು ಉಪ ಚುನಾವಣೆಯಲ್ಲಿ ಇಬ್ಬರು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇನೆ. ಈ ಚುನಾವಣೆ ಜೆಡಿಎಸ್ ಪಾಲಿಗೆ 2023ರ ಹೋರಾಟಕ್ಕೆ ಇದು ಸೆಮಿಫೈನಲ್ ಎಂದಿದ್ದಾರೆ.
ಜೆಡಿಎಸ್ ತಂತ್ರವೇನು?: ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳಿಗೆ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಲಗ್ಗೆ ಇಡಲು ಮುಂದಾಗಿದೆ. ಈ ಬೆಳವಣಿಗೆ ಸಹಜವಾಗಿ ಕಾಂಗ್ರೆಸ್‌ಗೆ ನಿದ್ದೆಗೆಡಿಸಿದೆ. ಈ ಹಿಂದಿನ ಚುನಾವಣೆ ಜಾತಿ ಸಮೀಕರಣದಲ್ಲಿ ಅಲ್ಪಸಂಖ್ಯಾತ ಸಮುದಾಯ ಹೆಚ್ಚಾಗಿ ತನ್ನೊಂದಿಗೆ ಇದ್ದು, ಜೆಡಿಎಸ್‌ನ ಈ ನಡೆಯಿಂದ ಎಲ್ಲಿ ಮತ ಬ್ಯಾಂಕ್ ಚದುರುವುದೋ ಎಂಬ ಭೀತಿ ಕಾಂಗ್ರೆಸ್ ನಾಯಕರನ್ನು ಕಾಡತೊಡಗಿದೆ.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಬಿಂಬಿಸಲು ಹೊರಟ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಲು ಪ್ರತಿತಂತ್ರ ಹೆಣೆದಿರುವ ಜೆಡಿಎಸ್ ದಳಪತಿಗಳು, ಉಪ ಚುನಾವಣೆಯಲ್ಲಿ ಪ್ರಯೋಗಕ್ಕೆ ಮುಂದಾಗಿದ್ದಾರೆ.
2011ರ ಜನಗಣತಿ ಪ್ರಕಾರ, ಕರ್ನಾಟದಲ್ಲಿ ಅಲ್ಪಸಂಖ್ಯಾತ ಜನಸಂಖ್ಯೆ ಶೇ.12.9 ಇತ್ತು, ಕಳೆದ ಹತ್ತು ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಿದೆ. ಒಂದು ಅಂದಾಜಿನ ಪ್ರಕಾರ ಹೇಳುವುದಾದರೆ ಸುಮಾರು 25 ಕ್ಕಿಂತ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಮತದಾರರು ನಿರ್ಣಾಯಕ. ಅಂದರೆ, ಈ ಸಮುದಾಯದ ಮತಗಳು ಮತ್ತು ಇನ್ನೊಂದು ಸಮುದಾಯದ ಮತ ಚದುರದಂತೆ ನೋಡಿಕೊಂಡರೆ ಅಭ್ಯರ್ಥಿ ಗೆಲುವು ಸುಲಭ. 2013, 2018ರ ವಿಧಾನಸಭಾ ಚುನಾವಣೆಯಲ್ಲಿ ಈ ಸಮುದಾಯ ಕಾಂಗ್ರೆಸ್ ಜತೆಗೆ ನಿಂತಿತ್ತು. ಇದೀಗ ಜೆಡಿಎಸ್ ಈ ಲೆಕ್ಕಾಚಾರದ ಕಡೆ ದೃಷ್ಟಿ ನೆಟ್ಟಿದ್ದು, ಕಾಂಗ್ರೆಸ್ ಮತ ಬ್ಯಾಂಕ್ ಹೊಡೆಯುವ ಆಲೋಚನೆ ಹೊಂದಿರುವುದು ಸ್ಪಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್‌ನ ಈ ನಡೆಯಿಂದ ತನಗೆ ಖಂಡಿತ ಹಿನ್ನಡೆಯಾಗಬಹುದು ಎಂದು ಆ ಪಕ್ಷದ ನಾಯಕರನ್ನು ಆಲೋಚಿಸುವಂತೆ ಮಾಡಿದೆ. ಸಾರ್ವತ್ರಿಕ ಚುನಾವಣೆಗೆ ಸಾಕಷ್ಟು ಕಾಲಾವಕಾಶವಿದೆ. ಅಷ್ಟರಲ್ಲಿ ನಡೆಯಬಹುದಾದ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಈಗಲೇ ಅಂದಾಜಿಸುವುದು ಕಷ್ಟಸಾಧ್ಯವಾದರೂ ಒಂದು ವೇಳೆ ಈಗಿನ ನಿಲುವು ಆ ಸಂದರ್ಭಕ್ಕೂ ಮುಂದುವರಿದರೆ ಕಾಂಗ್ರೆಸ್‌ಗೆ ಒಂದಷ್ಟು ನಷ್ಟವಾಗಲೂಬಹುದು. ಸುಲಭವಾಗಿ ಗೆಲ್ಲುವ ಕ್ಷೇತ್ರಗಳಲ್ಲಿ ಪೈಪೋಟಿ ಎದುರಿಸಬೇಕಾಗಬಹುದು. ಕೆಲವು ಕಡೆ ಗೆಲುವಿನ ಅಂತರ ಏರುಪೇರಾಗಬಹುದೆಂಬ ಲೆಕ್ಕಾಚಾರದಲ್ಲಿ ಕೈ ನಾಯಕರು ತೊಡಗಿದ್ದಾರೆ.