ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅಜಿರ್ಯಲ್ಲಿ 6 ನೌಕರ ಸಂಘಟನೆಗಳು ಹಾಗೂ 2 ಸಾರಿಗೆ ನಿಗಮಗಳನ್ನು ಪ್ರತಿವಾದಿಯಾಗಿಸಿರುವ ಹೈಕೋರ್ಟ್, ಹೊಸದಾಗಿ ಸೇರ್ಪಡೆಗೊಂಡ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಸರ್ಕಾರ ಹಾಗೂ ಮುಷ್ಕರ ನಿರತ ಸಾರಿಗೆ ನೌಕರರ ನಡುವೆ ಮಧ್ಯಸ್ಥಿಕೆ ವಹಿಸಿ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಒಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ನಟರಾಜ್ ಶರ್ಮಾ ಸಲ್ಲಿಸಿರುವ ಅಜಿರ್ಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಕರ್ನಾಟಕ ರಾಜ್ಯ ಸಾರಿಗೆ ನೌಕರರ ಕೂಟದ ಪರ ವಕೀಲ ಎನ್.ಪಿ ಅಮೃತೇಶ್ ಮಧ್ಯಂತರ ಅರ್ಜಿ ಸಲ್ಲಿಸಿ, ಪಿಐಎಲ್ ನಲ್ಲಿ ಇತರ ನೌಕರ ಸಂಘಟನೆಗಳಾದ ಸಿಐಟಿಯು, ಐಎನ್ ಟಿಯುಸಿ, ಎಐಟಿಯುಸಿ, ಬಿಎಂಎಸ್ ಟ್ರಾನ್ಸ್ ಪೋರ್ಟ್ ವರ್ಕರ್ಸ್ ಯೂನಿಯನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮಹಾಮಂಡಳಗಳನ್ನು ಪ್ರತಿವಾದಿಯಾಗಿಸಬೇಕು. ಜತೆಗೆ ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳನ್ನೂ ಪ್ರತಿವಾದಿಯನ್ನಾಗಿ ಸೇರಿಸಬೇಕು ಎಂದು ಕೋರಿದರು.
ವಾದ ಪರಿಗಣಿಸಿದ ಪೀಠ, ಪ್ರಕರಣದ ಸಂಬಂಧ ಎಲ್ಲ ಸಾರಿಗೆ ನೌಕರರ ಸಂಟನೆಗಳು ಹಾಗೂ ನಿಗಮಗಳ ಅಹವಾಲುಗಳನ್ನೂ ಆಲಿಸುವ ಅಗತ್ಯವಿದೆ ಎಂದು ತಿಳಿಸಿ, 6 ನೌಕರರ ಸಂಘಟನೆಗಳು ಹಾಗೂ 2 ಸಾರಿಗೆ ನಿಗಮಗಳನ್ನು ಪ್ರತಿವಾದಿಯಾಗಿಸಿ, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿತು. ಇದೇ ವೇಳೆ, ಹೊಸದಾಗಿ ಸೇರಿಸಲ್ಪಟ್ಟ ಸಂಘಟನೆಗಳು ಹಾಗೂ ನಿಗಮಗಳನ್ನು ಪ್ರತಿವಾದಿಯಾಗಿಸಿ 10 ದಿನಗಳ ಒಳಗೆ ತಿದ್ದುಪಡಿ ಅರ್ಜಿ ಸಲ್ಲಿಸುವಂತೆ ಮೂಲ ಅಜಿರ್ದಾರರಿಗೆ ಸೂಚಿಸಿದ ಪೀಠ, ವಿಚಾರಣೆ ಮುಂದೂಡಿತು.