ಬೆಂಗಳೂರು: ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ ಮಕ್ಕಳಿಗೆ ನೀಡುವ ವಿಷಯದಲ್ಲಿ ಸರ್ಕಾರ ಅಜಾಗರೂಕತೆ ಹಾಗೂ ಅಪ್ರಬುದ್ಧತೆಯಿಂದ ನಡೆದುಕೊಂಡಿದೆ ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ದೂರಿದ್ದಾರೆ.
ಶನಿವಾರ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಪಠ್ಯಪುಸ್ತಕಗಳನ್ನು ಮರು ಪರಿಷ್ಕರಣೆ ಮಾಡುವ ಕುರಿತು ಸರ್ಕಾರ ತೋರುತ್ತಿರುವ ಧೋರಣೆ ತಪ್ಪು. ಬೆಳೆಯುವ ಈ ಮಕ್ಕಳು ನಾಡಿನ ಮುಂದಿನ ಪೀಳಿಗೆ, ಪ್ರಜಾಪ್ರಭುತ್ವ, ನಮ್ಮ ದೇಶವನ್ನು ನಡೆಸುವವರಾಗಿದ್ದಾರೆ. ಮಕ್ಕಳ ಹೃದಯದಲ್ಲಿ ಶಿಕ್ಷಣದ ಮೂಲಕ ಜ್ಞಾನ, ವೈಚಾರಿಕತೆ, ಬೆಳಸಬೇಕು. ಅದನ್ನು ಹೊರತುಪಡಿಸಿ ಕೋಮುವಾದ, ಗೊಂದಲಮಯವಾದ ವಿಷಯಗಳನ್ನು ಅವರ ಮನಸ್ಸಿನಲ್ಲಿ ಬಿತ್ತಬಾರದು. ಪಕ್ಷಗಳ ನಡುವಿನ ನಿಲುವನ್ನು ಮಕ್ಕಳ ಮೇಲೆ ಹೇರಬಾರದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ನಗರಾಧ್ಯಕ್ಷ ರಮೇಶ್ ಗೌಡ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪಠ್ಯಪುಸ್ತಕದ ವಿಚಾರದಲ್ಲಿ ತಮ್ಮ ತಮ್ಮ ನಿಲುವುಗಳನ್ನು ತುರುಕಲು ಪ್ರಯತ್ನಿಸುತ್ತವೆ. ಮಕ್ಕಳು ವಿದ್ಯಾಭ್ಯಾಸ ಮಾಡಿ ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಶಿಕ್ಷಣ ಅಗತ್ಯವಿದೆ. ಆ ನಿಟ್ಟಿನಲ್ಲಿ ಸರ್ಕಾರಗಳು ಚಿಂತಿಸಬೇಕು. ವಿದ್ಯಾವಂತರನ್ನಾಗಿಸಿ, ಉದ್ಯೋಗಿಗಳಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಕೂಡಲೇ ರಾಜ್ಯ ಸರ್ಕಾರ ಹೊಸ ಪಠ್ಯ ಪರಿಷ್ಕರಣೆ ಕೈಬಿಡಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಬಿ.ಎಸ್ ರಜಪೂತ್, ಧನಂಜಯ್, ಸುಮನ್, ದಯಾಳ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಹಿಂಪಡೆದು, ಹಿಂದಿನ ಪುಸ್ತಕಗಳನ್ನೇ ಆದಷ್ಟು ಬೇಗ ನೀಡಿ: ಪೋಷಕರು, ಶಿಕ್ಷಣ ತಜ್ಞರ ಆಗ್ರಹ