ಪುತ್ತೂರು : ದೇವಸ್ಥಾನ ನಿರ್ಮಾಣವೆಂದರೆ ಇತಿಹಾಸ ಸೃಷ್ಟಿಸಿದಂತೆ. ಈ ಮಹಾಕಾರ್ಯ ಎಲ್ಲರಿಗೂ ಸಿಗುವುದಿಲ್ಲ. ಜೀವನದಲ್ಲಿ ಭಗವಂತ ಕೊಟ್ಟ ಅವಕಾಶದಲ್ಲಿ ಶ್ರದ್ಧೆಯಿಂದ ಭಾಗವಹಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಡಿ.21ರಿಂದ 28ರವರೆಗೆ ನಡೆಯಲಿರುವ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದಲ್ಲಿ ಬಿಡುಗಡೆ ಮಾಡಿ ಅವರು, ಮಾತನಾಡಿದರು.
ರಾಜರ ಕಾಲದಲ್ಲಿ ಕಟ್ಟಿದ್ದ ದೇವಳಗಳ ವಾಸ್ತುಶಿಲ್ಪ, ಕೆತ್ತನೆಗಳಲ್ಲಿ ಆ ಕಾಲದ ಜೀವನ ಪದ್ಧತಿ, ಸಂಪ್ರದಾಯ ಪ್ರತಿಬಿಂಬಿತವಾಗಿದೆ. ಅದೇ ರೀತಿ ನಮ್ಮ ಕಾಲಘಟ್ಟದಲ್ಲಿ ನಿರ್ಮಾಣವಾಗುವ ದೇವಸ್ಥಾನಗಳು ಮುಂದಿನ ಪೀಳಿಗೆ ಶ್ರದ್ಧೆ, ಭಕ್ತಿಯನ್ನು ವರ್ಗಾಯಿಸುವಂತಾಗಬೇಕು. ಹಿಂದೂ ಸಮಾಜ ಜಗತ್ತಿಗೆ ಮಾರ್ಗದರ್ಶನ ನೀಡುವಂತಾಗಬೇಕು. ಕೋವಿಡ್‌ನಿಂದ ಕಂಗೆಟ್ಟ ಕಾಲಘಟ್ಟದಲ್ಲಿಯೂ ಸರ್ವೆಯ ಭವ್ಯ ದೇಗುವ ನಿರ್ಮಾಣ ಎಂದಿಗೂ ಮರೆಯದ ಕಾರ್ಯ ಎಂದು ಶ್ಲಾಘಿಸಿದರು.
ದೇವಸ್ಥಾನದ ಅಂಗಳಕ್ಕೆ ಇಂಟರ್‌ಲಾಕ್, ತಡೆಗೋಡೆ, ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಸರ್ಕಾರದಿಂದ ನೆರವು ಒದಗಿಸುವಂತೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ದೇವಸ್ಥಾನದ ಮೂಲಸೌಕರ್ಯ ಬೇಡಿಕೆಗಳಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಜತೆಗೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಸಲಹೆ ಸೂಚನೆ ನೀಡಿದರು.
ಮಹಾಲಿಂಗೇಶ್ವರ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ : ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ಅಷ್ಟಮಂಗಲ ಪ್ರಶ್ನಾ ಚಿಂತನೆ ಆರಂಭವಾಗಿದೆ. ದೇವಾಲಯದ ಸಭಾಭವನದಲ್ಲಿ ನಾಡಿನ ಹೆಸರಾಂತ ದೈವಜ್ಞ ಜ್ಯೋತಿರ್‌ವಿದ್ವಾನ್ ವಳಕ್ಕುಂಜ ವೆಂಕಟರಮಣ ಭಟ್ ನೇತೃತ್ವದಲ್ಲಿ ಪ್ರಶ್ನಾ ಚಿಂತನೆ ಆರಂಭಗೊಂಡಿದೆ.
ದೇವಾಲಯಕ್ಕೆ ಆಗಮಿಸಿದ ದೈವಜ್ಞರನ್ನು ರಾಜಗೋಪುರದ ಬಳಿ ಸ್ವಾಗತ ನೀಡಿ ಕರೆದೊಯ್ಯಲಾಯಿತು. ದೇವಾಲಯದ ಸತ್ಯ-ಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೈವಜ್ಞರನ್ನು ಸಭಾಭವನಕ್ಕೆ ಕರೆ ತರಲಾಯಿತು. ಸಭಾಭವನದಲ್ಲಿ ಗಣಪತಿ ಪೂಜೆ ನೆರವೇರಿಸಿದ ಬಳಿಕ ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನು ಆರಂಭಿಸಲಾಯಿತು.
ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ್ ಪ್ರಸಾದ್ ಮುಳಿಯ ದೀಪಪ್ರಜ್ವಲನ ನಡೆಸಿದರು. ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ದೈವಜ್ಞರಾದ ಡಾ. ವಳಕ್ಕುಂಜ ಮುರಳಿ ಕೃಷ್ಣ ಭಟ್, ಇ.ಗೋಪಾಲಕೃಷ್ಣ ಭಟ್ ಹಾಗೂ ಸಹ ದೈವಜ್ಞರು ಪಾಲ್ಗೊಂಡಿದ್ದಾರೆ. ಒಂದು ವಾರಗಳ ಕಾಲ ಪ್ರಶ್ನಾ ಚಿಂತನೆ ಮುಂದುವರಿಯಲಿದೆ. ಅಷ್ಟಮಂಗಲ ಚಿಂತನೆಯು ದೈವಿಕ, ಲೌಕಿಕ ಮತ್ತು ಭೌತಿಕ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ.
ಈ ಸಂದರ್ಭ ಶ್ರೀ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಮಚಂದ್ರ ಕಾಮತ್, ಪ್ರಮುಖರಾದ ಕೊಟ್ಟಿಬೆಟ್ಟು ರತ್ನಾಕರ ನಾಕ್, ಶ್ರೀಧರ್ ಪಟ್ಲ, ಪುತ್ತೂರು ಪುರಸಭಾ ಮಾಜಿ ಉಪಾಧ್ಯಕ್ಷ ಹೆಚ್. ಉದಯ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.