ಬೆಂಗಳೂರು: ನನ್ನನ್ನು ವೈಯಕ್ತಿಕವಾಗಿ ನಿಂದಿಸಲಿ, ಸಹಿಸಿಕೊಳ್ಳುತ್ತೇನೆ. ಆದರೆ ಈ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದರೆ ಈ ಶಿವಕುಮಾರ್ ಯಾವತ್ತೂ ಸ್ವಾಭಿಮಾನ ಬಿಟ್ಟುಕೊಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ 136ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೇ ಬಲವಂತ ಮಾಡಿಯೋ ಏನೋ ಅಂತೂ ಕುಮಾರಸ್ವಾಮಿ ಅವರನ್ನೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಶಾಲು ಎಂದು ಹೇಳಿದ್ದೆ. ಅವರು ನನ್ನನ್ನು ವೈಯಕ್ತಿಕವಾಗಿ ನಿಂದಿಸಲಿ, ಸಹಿಸಿಕೊಳ್ಳುತ್ತೇನೆ. ಆದರೆ ಈ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದರೆ ಈ ಡಿ.ಕೆ.ಶಿವಕುಮಾರ್ ಎಂದಿಗೂ ಸ್ವಾಭಿಮಾನ ಬಿಟ್ಟುಕೊಡುವುದಿಲ್ಲ ಎಂದು ಕುಮಾರಸ್ವಾಮಿ ಅವರನ್ನು ಉಲ್ಲೇಖಿಸಿ ಮಾತನಾಡಿದರು.
ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾನು ರೈತರ ಹೋರಾಟದಲ್ಲಿ ಭಾಗವಹಿಸುವಾಗ ಹಸಿರು ಶಾಲು ಹಾಕಿಕೊಂಡಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್ ಶಾಲಿಗೆ ಶಕ್ತಿ ಇಲ್ಲ. ಹೀಗಾಗಿ ಹಸಿರು ಶಾಲು ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು. ಆಗ ನಾನು ಸಾಕಷ್ಟು ತಾಳ್ಮೆಯಿಂದ ಮಾತನಾಡಿದೆ. ನಿಮ್ಮ ತಂದೆಯವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಶಾಲು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದರು.
ಸ್ವಾತಂತ್ರ್ಯದ ಜತೆಗೆ ಸಂವಿಧಾನವನ್ನೂ ಕೊಟ್ಟಿದ್ದೇವೆ
ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದ ಹಾಗೇ. ಇದು ಒಂದು ವರ್ಗ, ಒಂದು ಜಾತಿಗೆ ಸೀಮಿತವಾದ ಪಕ್ಷವಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೊಂದೇ ಕಾಂಗ್ರೆಸ್ ಸಾಧನೆ ಅಲ್ಲ. ಈ ದೇಶಕ್ಕೆ ಸಂವಿಧಾನ ಕೊಟ್ಟಿದ್ದು ಕೂಡ ನಾವೇ. ನಾವು ಆ ಸಂವಿಧಾನದಲ್ಲೇ ಇಂದಿಗೂ ಬದುಕುತ್ತಿದ್ದೇವೆ. ಅದರಿಂದಲೇ ಶಿಕ್ಷಣ ಕೊಟ್ಟಿದ್ದೇವೆ. ಸಂಕಷ್ಟದ ಸಮಯದಲ್ಲಿ ದೇಶವನ್ನು ಒಂದುಗೂಡಿಸಲು ನಮ್ಮ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂದು ಘೋಷಣೆ ಮಾಡಿದರು ಎಂದರು.
ಜನಪ್ರಿಯ ಯೊಜನೆಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ
ದೇಶದ ಐಕ್ಯತೆ, ಸಮಗ್ರತೆ ಶಾಂತಿಗೋಸ್ಕರ ನಮ್ಮ ನಾಯಕರು ಪ್ರಾಣ ಅರ್ಪಿಸಿದ್ದಾರೆ. ಇಂದು ಗಡಿ ಭದ್ರತೆ, ಕೈಗಾರೀಕರಣ, ಕಾರ್ಮಿಕ ಕಾಯ್ದೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಕಾಯ್ದೆಗಳನ್ನು ಮಾಡಿದ್ದೇವೆ. ಉಳುವವನಿಗೆ ಭೂಮಿ ಕೊಟ್ಟಿದ್ದೇವೆ. ಜಾಗ ಇಲ್ಲದವರಿಗೆ ನಿವೇಶನ ಕೊಟ್ಟಿದ್ದೇವೆ. ಆಹಾರ ಭದ್ರತಾ ಕಾಯ್ದೆ ತಂದಿದ್ದೇವೆ. ನರೇಗಾ ಮೂಲಗ ಕೋಟ್ಯಂತರ ಜನರಿಗೆ ಉದ್ಯೋಗ ಕೊಟ್ಟಿದ್ದೇವೆ. ಈ ಯೋಜನೆಗಳನ್ನು, ನಮ್ಮ ಕಾಯ್ದೆಗಳನ್ನು ಈ ಬಿಜೆಪಿ ಸರ್ಕಾರ ಯಾಕೆ ತೆಗೆಯಲು ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಇವತ್ತು ನೀವು ಮಾತನಾಡುತ್ತಿರುವ ಗೋ ಹತ್ಯೆ ಕಾನೂನು 1964ರಲ್ಲೇ ಜಾರಿಗೆ ಬಂದಿದೆ. ಬಿಜೆಪಿ ಒಂದು ವರ್ಗದವರನ್ನು ಗುರಿಯಾಗಿಸಿ ಈಗ ಹೊಸದಾಗಿ ಕಾಯ್ದೆ ತರುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಒಂದು ವರ್ಗದ ಬಗ್ಗೆ ಚಿಂತಿಸುತ್ತಿಲ್ಲ. ಒಬ್ಬ ರೈತ ಯಾವುದೇ ಜಾತಿ, ಧರ್ಮದವನಾಗಿರಲಿ ಆತ ಹಸು, ದನಗಳನ್ನು ಸಾಕಿ ಜೀವನ ನಡೆಸುತ್ತಿದ್ದಾನೆ. ಅವನ ರಕ್ಷಣೆಗಾಗಿ ನಾವು ಇಂದು ಹೋರಾಟ ಮಾಡುತ್ತಿದ್ದೇವೆ. ನೀವು ವಯಸ್ಸಾದ ತಂದೆ-ತಾಯಿಯನ್ನು ಬೀದಿಗೆ ಬಿಡುತ್ತೀರಾ ಅಂತಾ ಕೇಳುತ್ತೀರಲ್ಲಾ? ಹಾಗಾದರೆ ವಯಸ್ಸಾದ ಗೋವುಗಳನ್ನು ಸಾಕಲು ರೈತನಿಗೆ ಪ್ರೋತ್ಸಾಹ ಧನ ನೀಡಿ. ಇದು ಕೇವಲ ಒಂದು ವರ್ಗದ ವಿಚಾರವಲ್ಲ. ಇದು ಒಂದು ಉದ್ಯಮದ ಪ್ರಶ್ನೆ. ಇದು ಒಂದಕ್ಕೊಂದು ಬೆಸೆದುಕೊಂಡಿರುವ ವಿಚಾರ ಎಂದರು.
ಓದಿ-ನಾನು ದನದ ಮಾಂಸ ತಿನ್ನುತ್ತೇನೆ, ನೀನು ಯಾವನಯ್ಯ ಕೇಳೋಕೆ : ಸಿದ್ದರಾಮಯ್ಯ
ಇದೊಂದು ಐತಿಹಾಸಿಕ ದಿನ
ನಾವೆಲ್ಲ ಕಾಂಗ್ರೆಸಿಗರು ಇಂತಹ ಪವಿತ್ರವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದೇ ಒಂದು ಭಾಗ್ಯ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. 72 ಜನ ಬುದ್ಧಿಜೀವಿಗಳು 1885ರಲ್ಲಿ ಮುಂಬೈನಲ್ಲಿ ಚಿಂತನ-ಮಂಥನ ಮಾಡಿ ಈ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಹೀಗೆ ಅಂದು ದೇಶದ ಭವಿಷ್ಯದ ಬಗ್ಗೆ ಚಿಂತಿಸಿ ಒಂದು ಸಂಘಟನೆಯನ್ನು ಆರಂಭಿಸಿದರು. ಅದರ ಫಲಶ್ರುತಿ ಇಂದು ನಾವೆಲ್ಲ ಇಲ್ಲಿ ನಿಂತಿದ್ದೇವೆ ಎಂದು ಹೇಳಿದರು.
ನಾವು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ ಎಂಬುದೇ ಒಂದು ಶಕ್ತಿ
ನಾನು ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ನಾವೊಂದಷ್ಟು ಮಂದಿ ದೆಹಲಿಗೆ ಹೋಗಿದ್ದೆವು. ಆಗ ಬಾಬು ಜಗಜೀವನ್ ರಾಮ್ ಅವರು ರಾಜೀವ್ ಗಾಂಧಿ ಅವರ ಬಳಿ ಬಂದು ನಾನು ಸಾಯುವ ಮುನ್ನ ಕಾಂಗ್ರೆಸಿಗನಾಗಬೇಕು. ಕಾಂಗ್ರೆಸಿಗನಾಗಿಯೇ ಸಾಯಬೇಕು ಎಂದು ಹೇಳಿಕೊಂಡಿದ್ದರು. ಈ ಕಾಂಗ್ರೆಸ್‌ನ ತ್ರಿವರ್ಣ ಬಾವುಟ ಬಿಜೆಪಿಯವರಾಗಲಿ, ಜನತಾದಳದವರಾಗಲಿ, ಕಮ್ಯುನಿಸ್ಟ್ ಪಕ್ಷದವರಾಗಲಿ ಹಾಕಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಹಾಕಿಕೊಳ್ಳುವ ಅವಕಾಶ ನಿಮಗೆ ಮಾತ್ರ ಇದೆ. ಇದೇ ಸೌಭಾಗ್ಯ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಶಾಂತಿ
ಇವತ್ತು ಬಿಜೆಪಿಗೆ ಇಷ್ಟು ದೊಡ್ಡ ಬಹುಮತ ಬಂದಿದೆ. ಆದರೆ ದೇಶದಲ್ಲಿ ರೈತರು, ಕಾರ್ಮಿಕರ ವಿಚಾರದಲ್ಲಿ ಎಷ್ಟು ಅಶಾಂತಿ ಮೂಡಿದೆ. ನನ್ನ ಜಿಲ್ಲೆಯಲ್ಲಿ ಟೊಯೊಟಾ ಕಂಪನಿ ಇದೆ. ಇಂದು ಸಾವಿರಾರು ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಅವರ ಸಮಸ್ಯೆ ಏನು ಅಂತಾ ಕೇಳಲು ತಯಾರಿಲ್ಲ. ಕಂಪನಿಯವರು ಕಾರ್ಮಿಕರ ಜತೆ ಮಾತನಾಡಲು ತಯಾರಿಲ್ಲ ಅಂತಿದ್ದಾರೆ. ಈ ಪರಿಸ್ಥಿತಿ ಯಾಕೆ ಬಂತು? ಈ ದೇಶದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕ ಕಾಯ್ದೆ ಸಡಿಲ ಮಾಡಿದ್ದರ ಪರಿಣಾಮ ಇದು. ನಮ್ಮ ಮಲ್ಲಿಕಾರ್ಜುನ ಖರ್ಗೆ ಹಾಗೂ ಆಸ್ಕರ್ ಫರ್ನಾಂಡಿಸ್ ಅವರು ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕರ ಪರ ಕಾನೂನುಗಳನ್ನು ತಂದಿದ್ದರು. ಆದರೆ ಈ ಸರ್ಕಾರದ ನೋಟು ರದ್ಧತಿ, ಜಿಎಸ್ಟಿ, ಆರ್ಟಿಕಲ್ 370 ಸೇರಿದಂತೆ ಯಾವುದೇ ನಿರ್ಧಾರಗಳಿಂದ ರಾಜ್ಯದಲ್ಲಿ ನೆಮ್ಮದಿ ಸಿಕ್ಕಿದೆಯಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೊರೊನಾ ಸಮಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ
ಕೋವಿಡ್ ಸಂದರ್ಭದಲ್ಲಿ 10 ಸಾವಿರ ಹಾಸಿಗೆ ಹಾಕುತ್ತೇವೆ ಎಂದರು. ಅಲ್ಲಿಗೆ 800 ರೋಗಿಗಳು ಹೋಗಲು ಆಗಲಿಲ್ಲ. ಕೇವಲ ಭ್ರಷ್ಟಾಚಾರ ಮಾಡಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇವರು ಸಹಕಾರ ಕೊಡುತ್ತಿಲ್ಲ ಎನ್ನುತ್ತಿದ್ದಾರೆ. ಅವರು ಹೇಳಿದ ಎಲ್ಲ ತೀರ್ಮಾನಕ್ಕೂ ಬದ್ಧರಾಗಿದ್ದೇವೆ. ಆದರೂ ಇಂತಹ ಆರೋಪ ಮಾಡುತ್ತಾರೆ. ಅವರು ದುಡ್ಡು ಹೊಡೆಯಲು ನಾವು ಸಹಕಾರ ನೀಡಬೇಕಿತ್ತಾ ಎಂದು ವ್ಯಂಗ್ಯವಾಡಿದರು.
2021 ಹೋರಾಟ ಹಾಗೂ ಸಂಘಟನೆ ವರ್ಷ
ಇನ್ನೆರಡು ದಿನಗಳಲ್ಲಿ 2021ನೇ ವರ್ಷ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನಾನು ಕಾರ್ಯಕರ್ತರಿಗೆ ಒಂದು ಕರೆ ನೀಡುತ್ತೇನೆ. ಹೊಸ ವರ್ಷ ಹೋರಾಟ ಹಾಗೂ ಪಕ್ಷ ಸಂಘಟನೆ ವರ್ಷವಾಗಬೇಕು. ನೀವು ಹಳ್ಳಿ, ಹಳ್ಳಿಯಲ್ಲೂ ಹೋರಾಟ ಪ್ರಾರಂಭ ಮಾಡಬೇಕು. ಜನವರಿ 6ರಿಂದ 18ರವರೆಗೂ ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಚುನಾವಣೆಯಲ್ಲಿ ಸೋತವರು, ಸಂಘ ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನು ಮಂಗಳೂರು, ಬಿಡದಿ, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಸಲು ನಿರ್ಧರಿಸಿದ್ದೇನೆ. ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಆ ಕ್ಷೇತ್ರದ ಸಮಸ್ಯೆ ಹಾಗೂ ಆ ಕ್ಷೇತ್ರದಲ್ಲಿ ಪಕ್ಷ ಯಾವ ದಿಕ್ಕಿನಲ್ಲಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು. ನಾನು ಬೂತ್ ಮಟ್ಟದ ಸಮಿತಿ ರಚಿಸಲು ಪ್ರಜಾ ಪ್ರತಿನಿಧಿ ಆ್ಯಪ್ ಸಿದ್ಧಪಡಿಸಿದ್ದೇನೆ. ಈ ಮಧ್ಯೆ ನನಗೆ ಎಐಸಿಸಿಯಿಂದ ನಿರ್ದೇಶನ ಬಂದಿದ್ದು, ಮೊದಲು ಪಂಚಾಯಿತಿ ಹಾಗೂ ವಾರ್ಡ್ ಮಟ್ಟದ ಸಮಿತಿ ಮಾಡಬೇಕು. ಮುಂದಿನ ತಿಂಗಳು 30ರ ಒಳಗಾಗಿ ಎಲ್ಲ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಅಧ್ಯಕ್ಷರು ಒಳಗೊಂಡಂತೆ ಪಂಚಾಯ್ತಿ ಮಟ್ಟದಲ್ಲಿ ಸಕ್ರಿಯವಾಗಿರುವವರನ್ನು ಸೇರಿಸಿಕೊಂಡು ಸಮಿತಿ ಮಾಡಲಾಗುವುದು ಎಂದು ತಿಳಿಸಿದರು.
ಪಕ್ಷಕ್ಕೆ ಮರಳಲು ಮನವಿ
ಈ ಸಂಸ್ಥಾಪನಾ ದಿನದಂದು ಪಕ್ಷ ಬಿಟ್ಟು ಹೋದವರು ಮತ್ತೆ ವಾಪಸಾಗಲು ಇಚ್ಛಿಸಿದರೆ ಸ್ವಾಗತಿಸುತ್ತೇನೆ. ಪಕ್ಷಕ್ಕೆ ಯಾವುದೇ ಷರತ್ತು ಇಲ್ಲದೆ ತತ್ವ ಹಾಗೂ ನಾಯಕತ್ವ ನಂಬಿ ಬರುವವರಿಗೆ ಸ್ವಾಗತ ಎಂದು ಹೇಳಿದರು.