ಬೆಂಗಳೂರು: ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ರಾಜ್ಯದ ಭ್ರಷ್ಟಾಚಾರ ನಿರತ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಮಾಡಬೇಕಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅವಿನಾಭಾವ ಸಂಬಂಧ ಇದೆ. ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಈ ಪುಣ್ಯ ಭೂಮಿಯಿಂದ ಚುನಾವಣಾ ಗೆದ್ದಿದ್ದರು. ಇವತ್ತು ಕೊರೊನಾ ಮಹಾಮಾರಿ ಕಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಮೆಡಿಕಲ್ ಕಿಟ್ ಹಗರಣ ಮಾಡಿದ್ರು. ಬಡವರಿಗೆ ತಲುಪಬೇಕಾದ ಹಣ ಹೊಡೆದ್ರು. ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದರು. ಈ ರಾಜ್ಯದಲ್ಲಿ ಎರಡು ಟ್ಯಾಕ್ಸ್ ಇವೆ. ಒಂದು ಜಿಎಸ್ ಟಿ, ಇನ್ನೊಂದು ವಿಎಸ್ಟಿ. ಯಡಿಯೂರಪ್ಪ ಮಕ್ಕಳು, ಮೊಮ್ಮಕ್ಕಳು ಭ್ರಷ್ಟಾಚಾರದಲ್ಲಿ ನಿರತರಾಗಿದ್ದು, ಇವರ ಬಗ್ಗೆ ನಾವು ಧ್ವನಿ ಎತ್ತಬೇಕಿದೆ ಎಂದರು.
ಉಳುವವನೇ ಒಡೆಯ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಏಕೆಂದರೆ ಆ ಸಂದರ್ಭ ಕಾನೂನು ಉಲ್ಲಂಘಿಸಿದ ಒಟ್ಟು 13,814 ಪ್ರಕರಣಗಳು ವಿಚಾರಣೆ ಹಂತದಲ್ಲಿ ಇದ್ದವು. ಭೂಮಿಯನ್ನು ನುಂಗುವ ಹುನ್ನಾರ ನಡೆಸಿದವರು ಮಾಡಿದ ಕೃತ್ಯ ನಿವಾರಣೆಗೆ ಒಂದು ಕಾನೂನಿನ ಮೂಲಕ ಕಡಿವಾಣ ಹಾಕಿದ್ದರು. ಈ ಮೂಲಕ ರೈತರ ಭೂಮಿಯನ್ನು ನುಂಗಿ ಹಾಕಲು ಸಂಚು ನಡೆಸಿದ್ದ ಎಲ್ಲಾ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದರು. ಸಾಕಷ್ಟು ಪ್ರಭಾವಿ ವ್ಯಕ್ತಿಗಳು ಇದರ ಹಿಂದಿದ್ದರೂ ಕೂಡ ಯಾವುದಕ್ಕೂ ಮುಲಾಜು ಮಾಡದೆ ಕಾನೂನು ಜಾರಿಗೆ ತಂದಿದ್ದರು.
ಆದರೆ, ಅಂತಹ ಮಹತ್ವದ ಕಾನೂನನ್ನು ತಿದ್ದುಪಡಿ ತರುವ ಮೂಲಕ ಮತ್ತೊಮ್ಮೆ ಭೂ ಮಾಫಿಯಾದವರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ರಾಜ್ಯದ ರೈತರು ಇಂತಹ ಸರ್ಕಾರ ಮುನ್ನಡೆಯಲು ಅವಕಾಶ ಮಾಡಿಕೊಡಬೇಕೆ? ಇಂಥದ್ದೊಂದು ಮಾರಕ ಕಾನೂನು ತಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾಧಿಸುವುದಾದರೂ ಏನಿದೆ? ಎಪಿಎಂಸಿ ಕಾಯ್ದೆ ತಿದ್ದುಪಡಿ ಕೂಡ ರೈತರಿಗೆ ಮಾರಕವಾಗಿದೆ. ಈ ಎರಡು ಕಾಯ್ದೆಗಳ ತಿದ್ದುಪಡಿಯ ಹಿಂದೆ ಕನಿಷ್ಠ ಬೆಂಬಲ ಬೆಲೆಯನ್ನು ತೆಗೆದುಹಾಕಬೇಕೆಂದು ನರೇಂದ್ರ ಮೋದಿಯವರ ಚಿಂತನೆ ಇದೆ. ಈ ಒಂದು ತಿದ್ದುಪಡಿಯಿಂದ ಜನ ತಮ್ಮ ಕನಿಷ್ಠ ಬೆಂಬಲ ಬೆಲೆಯನ್ನು ಯಾವ ರೀತಿ ಪಡೆಯಲು ಸಾಧ್ಯ ಎನ್ನುವುದನ್ನು ನರೇಂದ್ರ ಮೋದಿ ಹಾಗೂ ಬಿಎಸ್ ಯಡಿಯೂರಪ್ಪ ತಿಳಿಸಬೇಕು ಎಂದು ನಾನು ಬಯಸುತ್ತೇನೆ ಎಂದರು.
ರೈತರು ಎಲ್ಲಿ ಬೇಕಾದರೂ ಕೃಷಿ ಮಾಡುವ ಅವಕಾಶ ಈ ತಿದ್ದುಪಡಿಯಿಂದ ಲಭಿಸಲಿದೆ ಎಂದು ಪ್ರಧಾನಿ ಹೇಳುತ್ತಾರೆ. ಚಿಕ್ಕ ಪ್ರಮಾಣದ ಭೂಮಿಯನ್ನು ಹೊಂದಿರದ ಹಾಗೂ ರೈತಾಪಿ ವೃತ್ತಿಯನ್ನು ಮಾಡಿದ ಪ್ರಧಾನಿ ಇಂಥದೊಂದು ಜನವಿರೋಧಿ ಹಾಗೂ ರೈತ ವಿರೋಧಿ ಕಾನೂನನ್ನು ತಿದ್ದುಪಡಿ ಮಾಡಿದ್ದಾರೆ. ಕೃಷಿ ಸಚಿವರಿಗೂ ಇದರ ಮಾದಕತೆಯ ಅರಿವಿಲ್ಲ ಎಂದು ಅಭಿಪ್ರಾಯಪಟ್ಟರು.