ಯಲಹಂಕ(ಬೆಂಗಳೂರು): ಸಿಲಿಕಾನ್ ಸಿಟಿಯಲ್ಲಿ ವರುಣ ಆರ್ಭಟ (rain in Bangalore) ಕೊಂಚ ಕಡಿಮೆಯಾಗಿದ್ದರೂ ಕಳೆದ ಕೆಲ ದಿನಗಳಿಂದ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿ ಮಾಡಿದೆ. ಭಾರಿ ಮಳೆಯಿಂದ ಯಲಹಂಕದ ಕೆರೆ ಕೋಡಿ ಬಿದ್ದಿದ್ದು, ಕೆರೆಯ ನೀರು ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ನುಗ್ಗಿದ್ದು ಸಂಪೂರ್ಣವಾಗಿ ಜಲಾವೃತವಾಗಿದೆ.
ಸದ್ಯ ದೋಣಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಕಳೆದ ರಾತ್ರಿ ಯಲಹಂಕದಲ್ಲಿ ನಾಲ್ಕು ತಾಸಿಗೂ ಹೆಚ್ಚು ಸುರಿದ ಮಳೆಯಿಂದ ಯಲಹಂಕ ಕೆರೆ ಕೋಡಿ ಬಿದ್ದಿದೆ. ಅಪಾರ್ಟ್‌ಮೆಂಟ್‌ನಲ್ಲಿ 4 ರಿಂದ 5 ಅಡಿ ನೀರು ನಿಂತಿದ್ದು, ಸುರಕ್ಷಿತೆಯ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಅಪಾರ್ಟ್‌ಮೆಂಟ್‌ನಲ್ಲಿ 3 ಸಾವಿರಕ್ಕೂ ಹೆಚ್ಚು ನಿವಾಸಿಗಳಿದ್ದು, ಸುರಕ್ಷಿತ ಸ್ಥಳಕ್ಕೆ ಕಳಿಸಲಾಗುತ್ತಿದೆ. ಅಂಬೇಡ್ಕರ್ ಭವನ ಹಾಗೂ ಹಾಸ್ಟೆಲ್‌ಗಳಲ್ಲಿ ವಸತಿ ಸೌಲಭ್ಯ ನೀಡಿ ಊಟದ ವ್ಯವಸ್ಥೆ ಮಾಡಲಾಗಿದೆ.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ತಹಸೀಲ್ದಾರ್ ನಾರಾಯಣಸ್ವಾಮಿ ಸೇರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳ ಕುಂದು ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಸ್ಥಳಾಂತರ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ.
ಎಂಟು ಅಡಿಗಳ ಎರಡು ರಾಜಕಾಲುವೆ ಒತ್ತುವರಿ ಮಾಡಿದ ಪರಿಣಾಮ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಲು ಕಾರಣವಾಗಿದೆ ಎನ್ನಲಾಗ್ತಿದೆ. ನೀರಿನ ಜೊತೆಯಲ್ಲಿ ಕೇಂದ್ರಿಯ ವಿಹಾರಕ್ಕೆ ಹಾವು, ಚೇಳುಗಳ ಆಗಮನವಾಗಿದ್ದು, ಹಾವುಗಳ ಕಾಟದಿಂದಾಗಿ ನೀರಿನಲ್ಲಿ ಬರುವುದಕ್ಕೂ ನಿವಾಸಿಗಳು ಭಯ ಪಡುತ್ತಿದ್ದಾರೆ. ಎರಡು ದಿನಗಳಿಂದ ಬಂದಿದ್ದ ನೀರನ್ನು ನಿನ್ನೆಯಷ್ಟೆ ಖಾಲಿ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದೆ.
ಯಲಹಂಕದಲ್ಲಿ 134 ಮಿಲಿ ಮೀಟರ್ ಮಳೆ
ಅಲ್ಲಾಳಸಂದ್ರ ಕೆರೆ ತುಂಬಿ ಹರಿಯುತ್ತಿದ್ದು, ಕೆಲ ರಸ್ತೆಗಳಲ್ಲಿ ನೀರು ಹರಿಯುತ್ತಿದೆ. ಇದರಿಂದ ಕರೆ ಸುತ್ತಮುತ್ತಲಿನ ಪ್ರದೇಶದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಯಲಹಂಕ, ನಾಗವಾರ, ಕೋಗಿಲು ಕ್ರಾಸ್, ವಿದ್ಯಾರಣ್ಯಪುರ ಪ್ರದೇಶದಲ್ಲಿ ಮಳೆ ಭಾರಿ ಸಂಕಷ್ಟ ತಂದೊಡ್ಡಿದೆ. ಕಳೆದ 24 ಗಂಟೆಗಳಲ್ಲಿ ಯಲಹಂಕದಲ್ಲಿ 134 ಮಿಮೀ ಮಳೆಯಾಗಿದೆ.