ಬೆಂಗಳೂರು: ಮಾರಾಟವಾಗದೇ ಉಳಿದಿರುವ 800 ಮಿಲಿಯನ್ ಟನ್ ಅದಿರು ಮಾರಾಟಕ್ಕಿರುವ ತಾಂತ್ರಿಕ ತೊಂದರೆ ನಿವಾರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಮಾರಾಟವಾಗದೇ ಉಳಿದಿರುವ 800 ಮಿಲಿಯನ್ ಟನ್ ಅದಿರು ಮಾರಾಟಕ್ಕಿರುವ ತಾಂತ್ರಿಕ ತೊಂದರೆ ನಿವಾರಿಸುವಂತೆ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
‘ಸಿ’ ವರ್ಗದ ಗಣಿ ಗುತ್ತಿಗೆಗಳನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಈ ಮೊದಲೇ ಗಣಿಗಾರಿಕೆ ಮಾಡಿರುವ ಸುಮಾರು 800 ಮಿಲಿಯನ್ ಟನ್ ಅದಿರು ಮಾರಾಟವಾಗದೇ ಉಳಿದುಕೊಂಡಿದೆ. ಇದನ್ನು ಮಾರಾಟ ಮಾಡಲು ಇರುವ ತಾಂತ್ರಿಕ ತೊಂದರೆಗಳ ನಿವಾರಣೆಗೆ ಮಹಾಲೇಖಪಾಲರೊಂದಿಗೆ ಚರ್ಚಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ರಾಜ್ಯದಲ್ಲಿ ಖನಿಜ ಪರವಾನಗಿ ಇಲ್ಲದೆ ಅಕ್ರಮ ಕಲ್ಲು ಗಣಿಗಾರಿಗೆ ಮಾಡುತ್ತಿರುವುದನ್ನು ತಡೆಗಟ್ಟಲು ಡ್ರೋನ್ ಸರ್ವೇ ಕೈಗೊಳ್ಳಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರಿನ ಖನಿಜಾನ್ವೇಷಣೆಗೆ ಶೀಘ್ರವಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಕಾರ್ಯ ಕೈಗೊಳ್ಳುವಂತೆ ಹೇಳಿದರು.
ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಉತ್ತಮಪಡಿಸಲು ಗುತ್ತಿಗೆದಾರರಿಂದ ರಾಜಧನದ ಶೇ. 10 ಮತ್ತು 30ರಷ್ಟು ಅನ್ವಯವಾಗುವಂತೆ ಜಿಲ್ಲಾ ಪ್ರತಿಷ್ಠಾನ ನಿಧಿಗೆ ಈವರೆಗೆ ವಂತಿಗೆ ₹ 28 ಕೋಟಿ ಸಂಗ್ರಹವಾಗಿದೆ. ಭಾರತ ಸರ್ಕಾರದ ನಿರ್ದೇಶನದಂತೆ ಕೋವಿಡ್-19ಕ್ಕೆ ಸೋಂಕು ತಡೆಗಟ್ಟಲು ಈ ಮೊತ್ತವನ್ನು ವಿನಿಯೋಗಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ರಾಜ್ಯದಲ್ಲಿ ಅಂದಾಜು 45 ದಶಲಕ್ಷ ಮೆಟ್ರಿಕ್ ಮರಳಿಗೆ ಬೇಡಿಕೆ ಇದೆ. 38 ದಶಲಕ್ಷ ಮೆಟ್ರಿಕ್ ಟನ್ ಪೂರೈಸಲಾಗುತ್ತಿದೆ. ಹೊಸ ಮರಳು ನೀತಿಯ ಅನುಷ್ಠಾನದಿಂದ ಸರ್ಕಾರಕ್ಕೆ ಹೆಚ್ಚಿನ ರಾಜಧನ ಸಂಗ್ರಹವಾಗಲಿದೆ ಎಂದು ಸಚಿವರು ತಿಳಿಸಿದರು.
ಕೆಎಂಎಂಸಿಆರ್ ನಿಯಮಾವಳಿಗಳ ತಿದ್ದುಪಡಿ ನಂತರ ಬಾಕಿ ಇರುವ ಅರ್ಹ ಅರ್ಜಿಗಳಿಗೆ ಗಣಿ ಗುತ್ತಿಗೆಗಳ ಮಂಜೂರಾತಿ ಮತ್ತು ಹರಾಜು ಮೂಲಕ ಕಟ್ಟಡ ಕಲ್ಲು ಗಣಿ ಗುತ್ತಿಗೆಗಳಿಗೆ ಮಂಜೂರಾತಿ ನೀಡಲಾಗುವುದು. ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ 2020ರ ಜಾರಿಗೊಳಿಸಲು ಕ್ರಮ ವಹಿಸಲಾಗುತ್ತಿದ್ದು, ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ಮತ್ತು ಪರವಾನಗಿ ವಿತರಣಾ ನಿಯಮಗಳ ಸರಳೀಕರಣ ಹಾಗೂ ಉಪ ಖನಿಜಗಳ ಮೇಲಿನ ರಾಜಧನ ಪರಿಷ್ಕರಣೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.