ಬೆಂಗಳೂರು : ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಕೊರೊನಾ ಪಾಸಿಟಿವ್ ವಿಚಾರ ಇಂದು ವಿಧಾನಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.
ಕೊರೊನಾ ಪಾಸಿಟಿವ್ ಬಂದು ಎರಡೇ ದಿನಕ್ಕೆ ಪ್ರಿಯಾಂಕ್ ಖರ್ಗೆ ಅವರು ಸದನಕ್ಕೆ ಬಂದಿದ್ದಾರೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಕೆಣಕಿದರು. ಬಳಿಕ ತಮಗೆ ಕೊರೊನಾ ನೆಗೆಟಿವ್ ಬಂದಿದೆ ಎಂಬುದನ್ನು ಖುದ್ದು ಪ್ರಿಯಾಂಕ ಖರ್ಗೆ ಅವರೇ ಸದನದಲ್ಲಿ ಸ್ಪಷ್ಟಪಡಿಸಿದರು.
ವಿತ್ತೀಯ ಹೊಣೆಗಾರಿಕೆ ವಿಧೇಯಕದ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಪಾಸಿಟವ್ ಬಂದಿದೆ ಎಂಬ ಸುದ್ದಿ ಇದೆ ಎಂದು ಹೇಳಿದರು. ತಕ್ಷಣ ಎದ್ದು ನಿಂತ ಪ್ರಿಯಾಂಕ್ ಖರ್ಗೆ ಇಲ್ಲ ತಮಗೆ ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದರು.
ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನನಗೆ ಅವರು ನೆಗೆಟಿವ್ ವರದಿ ನೀಡಿದ್ದಾರೆ ಎಂದು ಹೇಳಿದರು. ಆಗ ಮಾಧುಸ್ವಾಮಿ ಅವರು, ಹಾಗಾದರೆ ಸರಿ ಈ ಬಗ್ಗೆ ಹೆಚ್ಚೇನು ಚರ್ಚೆ ಬೇಡ ಎಂದರು. ಆದರೂ ಮಾತು ಮುಂದುವರೆಸಿದ ಪ್ರಿಯಾಂಕ್ ಖರ್ಗೆ, ಸೆಪ್ಟೆಂಬರ್ 19ರಂದು ಖಾಸಗಿ ಲ್ಯಾಬ್‌ನಲ್ಲಿ ಕೊರೊನಾ ಪರೀಕ್ಷೆಗೊಳಪಟ್ಟಾಗ ಪಾಸಿಟಿವ್ ವರದಿ ಬಂದಿತ್ತು. ಆಗ ರೋಗ ಲಕ್ಷಣಗಳಿಲ್ಲದ ಕಾರಣ ಮನೆಯಲ್ಲೇ ನಿಯಮಾವಳಿಗಳ ಪ್ರಕಾರ ಐಸೋಲೇಶನ್ ಆಗಿದ್ದೆ. ಮತ್ತೆ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂತು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಚಿಕಿತ್ಸೆ ನೀಡಿದ ಮಣಿಪಾಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ ಅವರು ಮತ್ತೊಮ್ಮೆ ತಪಾಸಣೆ ಮಾಡಿಸಿ ಎಂದು ಹೇಳಿದರು. ತಪಾಸಣೆ ಮಾಡಿಸಿದಾಗ ವರದಿ ನೆಗೆಟಿವ್ ಬಂದಿದೆ. ಮೊದಲೆರಡು ದಿನದ ಸದನಕ್ಕೆ ನಾನು ಹಾಜರಾಗಿಲ್ಲ. ಈಗ ಹಾಜರಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಗರಂ ಆದ ಸ್ಪೀಕರ್ : ಉತ್ತರ ನೀಡುತ್ತಿದ್ದ ವೇಳೆ ಸಚಿವ ಆರ್ ಅಶೋಕ್ ಅವರು ಮಾಸ್ಕ್ ಧರಿಸದೆ ಮಾತನಾಡುತ್ತಿದ್ದರು. ಆಗ, ಕಾಂಗ್ರೆಸ್ ಸದಸ್ಯೆ ಸೌಮ್ಯರೆಡ್ಡಿ ಎದ್ದು ನಿಂತು ಮಾಸ್ಕ್ ಹಾಕದೆ ಮಾತನಾಡುತ್ತಿರುವುದಕ್ಕೆ ಆಕ್ಷೇಪಿಸಿದರು. ಆಗ ಸ್ಪೀಕರ್ ಮಧ್ಯೆ ಪ್ರವೇಶಿಸಿ ನಾನು ಪದೇಪದೆ ಮಾಸ್ಕ್ ಹಾಕಿ ಎಂದು ಹೇಳುತ್ತಲೇ ಇದ್ದೇನೆ. ಇದೊಂದು ಗಂಭೀರ ಪರಿಸ್ಥಿತಿ ಇದೆ ಎಂದು ಗರಂ ಆದರು. ಆಗ ಅಶೋಕ್ ಅವರು ಮಾಸ್ಕ್ ಹಾಕಿದರು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡೇ ಮಾತನಾಡಬೇಕೆಂದು ಸ್ಪೀಕರ್ ಸೂಚಿಸಿದರು.