ಬೆಂಗಳೂರು: ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಡಿ ಇಲಾಖೆಗಳಿಗೆ ನಿಗದಿಯಾಗಿರುವ ಅನುದಾನವನ್ನು ಬೇರೆ ಇಲಾಖೆಗೆ ಬಿಡುಗಡೆ ಮಾಡದಂತೆ ಆರ್ಥಿಕ ಇಲಾಖೆಗೆ ಮನವಿ ಮಾಡಿರುವುದಾಗಿ ಲೋಕೋಪಯೋಗಿ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ಪ್ರಶ್ನೋತ್ತರ ವೇಳೆ ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲೆಗೆ 2019-29 ಹಾಗೂ 2020-21ರಲ್ಲಿ ಎಸ್‍ಸಿಪಿ ಯೋಜನೆಯಡಿ 1992.82 ಲಕ್ಷ ಹಾಗೂ ಟಿಎಸ್‍ಪಿ ಯೋಜನೆಯಡಿ 830 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಅನುದಾನವನ್ನು ಡೀಮ್ಡ್ ಎಕ್ಸ್ಪೆಂಡೀಚರ್ ಎಂದು ಪರಿಗಣಿಸಿ ತಡೆಹಿಡಿಯಲಾಗಿದೆ. ಎಸ್‍ಸಿಪಿ ಮತ್ತು ಟಿಎಸ್‍ಪಿ ನಿಯಮಗಳ ಪ್ರಕಾರ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಗಮನಕ್ಕೆ ತಂದರು.
ಆಗ ಮಧ್ಯ ಪ್ರವೇಶ ಮಾಡಿದ ಗೋವಿಂದ ಕಾರಜೋಳ, ಕೋವಿಡ್-19 ಹಿನ್ನೆಲೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿಲ್ಲ. ಕಲಬುರಗಿ ಜಿಲ್ಲೆಗೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ನಿಗದಿ ಮಾಡಿದ ಅನುದಾನವನ್ನು ಡೀಮ್ಡ್ ಎಕ್ಸ್ಪೆಂಡಿಚರ್ ಎಂಬ ಕಾರಣಕ್ಕೆ ತಡೆಹಿಡಿಯಲಾಗಿದೆ. ಇದನ್ನು ಪರಿಶೀಲನೆ ಮಾಡಬೇಕೆಂದು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಓದಿ-ರಾಜ್ಯದಲ್ಲಿ ಸಂಪೂರ್ಣವಾಗಿ ಗಣಿಗಾರಿಕೆ, ಕಲ್ಲು ಕ್ವಾರಿ ನಿಷೇಧ ಸಾಧ್ಯವಿಲ್ಲ: ಸಿಎಂ ಯಡಿಯೂರಪ್ಪ
ಸಚಿವರ ಉತ್ತರಕ್ಕೆ ಆಕ್ಷೇಪಿಸಿದ ಶಾಸಕ ಪ್ರಿಯಾಂಕ್ ಖರ್ಗೆ, ಕಾನೂನಿನಲ್ಲಿ ಅವಕಾಶವಿಲ್ಲ ಎಂದಾಗ ನೀವು ಹೇಗೆ ಈ ಅನುದಾನವನ್ನು ಬೇರೊಂದು ಇಲಾಖೆಗೆ ವರ್ಗಾವಣೆ ಮಾಡುತ್ತೀರಿ? ಇದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಗರಂ ಆದರು.
ಈ ವೇಳೆ ಸಚಿವ ಬಸವರಾಜ ಬೊಮ್ಮಾಯಿ, ಕೋವಿಡ್ ಬಂದ ಕಾರಣ ಈ ಬಾರಿ ಎಲ್ಲವೂ ಏರುಪೇರಾಗಿದೆ. ನಿಮ್ಮ ಸರ್ಕಾರದ ಅವಧಿಯಲ್ಲೇ ಈ ಯೋಜನೆಗೆ ಮೀಸಲಿಟ್ಟಿದ್ದ ಹಣ ಸಂಪೂರ್ಣವಾಗಿ ಬಳಕೆಯಾಗಿರಲಿಲ್ಲ. ಒಂದು ವೇಳೆ ಇಲ್ಲಿ ಮೀಸಲಿಟ್ಟ ಹಣ ಸಂಪೂರ್ಣವಾಗಿ ಖರ್ಚಾಗದಿದ್ದರೂ ಮುಂದಿನ ವರ್ಷ ಬಳಕೆಯಾಗುತ್ತದೆ. ಇದರ ಬಗ್ಗೆ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.
ಇದನ್ನು ಒಪ್ಪದ ಪ್ರಿಯಾಂಕ್ ಖರ್ಗೆ ಆಕ್ಷೇಪಿಸಿದರು. ಆಗ ಸಚಿವ ಮಾಧುಸ್ವಾಮಿ ಅವರು ಈಗ ಕಾನೂನು ಮಾತನಾಡುವ ನೀವು ನಿಮ್ಮ ಸರ್ಕಾರದ ಅವಧಿಯಲ್ಲಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಅಡಿ ಮೀಸಲಿಟ್ಟಿದ್ದ ಹಣವನ್ನು ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ಮತ್ತು ವೈಟ್ ಟ್ಯಾಪಿಂಗ್‍ಗೆ ಬಳಕೆ ಮಾಡಿಕೊಂಡಿದ್ದನ್ನು ಮರೆತು ಬಿಟ್ಟಿದ್ದೀರಾ? ಆಗ ಕಾನೂನು ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.