ಬೆಂಗಳೂರು: ಔರಾದ್ಕರ್ ವರದಿಯನ್ನು ಜಾರಿಗೆ ತರಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಔರಾದ್ಕರ್ ವರದಿಯಂತೆ ವೇತನ ಪರಿಷ್ಕರಣೆಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಅಗಸ್ಟ್ 1ರಿಂದ ವೇತನ ಪರಿಷ್ಕರಣೆಯಾಗಲಿದೆ. ಔರಾದ್ಕರ್ ವರದಿಯಲ್ಲಿ ಅಗ್ನಿಶಾಮಕ, ಕಾರಾಗೃಹ ಇಲಾಖೆಯನ್ನು ಹೊರಗಿಡಲಾಗಿತ್ತು. ಈ ಎರಡು ಇಲಖೆಯನ್ನೂ ಸೇರಿಸಿ ವೇತನ ಪರಿಷ್ಕರಿಸುವ ಬಗ್ಗೆ ಮುಂದಿನ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಹಿಂದಿನ ಸರ್ಕಾರ ಔರಾದ್ಕರ್ ಸಮಿತಿ ಜಾರಿಗೊಳಿಸಿ ಆದೇಶ ಹೊರಡಿಸಿತ್ತು. ಇದೀಗ ಹೊಸ ಸರ್ಕಾರ ಮತ್ತೆ ಔರಾದ್ಕರ್ ಸಮಿತಿ ಸಂಬಂಧ ಅನುಮೋದನೆ ನೀಡಿರುವ ಬಗ್ಗೆ ಗೊಂದಲ ಉಂಟಾಗಿದೆ. ಇದು ಘಟನೋತ್ತರ ಅನುಮೋದನೆ ಎಂದು ಸರ್ಕಾರದ ಸಮಜಾಯಿಶಿಯಾಗಿದೆ. ಆದರೆ, ಯಾವತ್ತಿನಿಂದ ಈ ಪರಿಷ್ಕೃತ ವೇತನವನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ಪೊಲೀಸರು ಪರಿಷ್ಕೃತ ವೇತನ ಪಡೆಯಲು ಇನ್ನೂ ಕೆಲ ತಿಂಗಳು ಕಾಯಬೇಕಾಗಬಹುದು ಎಂದರು.
ಸಂಪುಟದ ಪ್ರಮುಖ ತೀರ್ಮಾನಗಳು:
- ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ಮಾನವ ಹಕ್ಕುಗಳ ಒಬ್ಬ ಸದಸ್ಯರನ್ನು ಧಾರವಾಡಕ್ಕೆ ಸ್ಥಳಾಂತರಿಸುವ ಆದೇಶ ಹಿಂಪಡೆಯಲು ತೀರ್ಮಾನ
- ಕೃಷಿ ಬೆಂಬಲ ಬೆಲೆ ನಿಗದಿಗೆ ಉಪಸಮಿತಿ ರಚನೆಗೆ ಸಿಎಂಗೆ ಅಧಿಕಾರ ನೀಡಲು ಸಮ್ಮತಿ
- ಈ ಹಿಂದಿನ ಸೋಲಾರ್ ಪಾರ್ಕ್ ನಿರ್ಮಿಸಲು ಬೇಕಾಗಿದ್ದ 100 ಮೆಗಾವ್ಯಾಟ್ ಮಿತಿಯನ್ನು 25 ಮೆಗಾವ್ಯಾಟ್‌ಗೆ ಇಳಿಕೆ. ಸರ್ಕಾರ, ಖಾಸಗಿಯವರಿಗೂ ವಿದ್ಯುತ್ ಮಾರಾಟ ಮಾಡಲು ಅನುಮತಿ
- ಲೋಕಾಯುಕ್ತ ಅಭಿಯೋಜಕರಾಗಿ ಎಂ ಹೆಚ್ ಇಟಗಿ ನೇಮಕಕ್ಕೆ ಒಪ್ಪಿಗೆ
- ಲೋಕೋಪಯೋಗಿ ಇಲಾಖೆಯಿಂದ ಬೆಂಗಳೂರಿನ ಸಿವಿಲ್ ಕೋರ್ಟ್ ಮೂಲ ಸೌಕರ್ಯ ಅಭಿವೃದ್ಧಿಗಾಗಿ 35 ಕೋಟಿ ರೂ. ಅನುಮೋದನೆ
- ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಎಂದು ಹೆಸರು ಬದಲಾಯಿಸಲು ಸಮ್ಮತಿ
- ದಾವಣಗೆರೆಯ ಜಗಳೂರಿನ 53 ಕೆರೆಗಳಿಗೆ ನೀರು ತುಂಬಿಸಲು 660 ಕೋಟಿ ರೂ. ಡಿಪಿಆರ್ ಸಿದ್ಧಪಡಿಸಲು ಆಡಳಿತಾತ್ಮಕ ಅನುಮೋದನೆ.
- ಚಿತ್ರದುರ್ಗದ ಬರಮ ಸಾಗರ್ 38 ಕೆರೆ ಹಾಗೂ ದಾವಣಗೆರೆಯ ಒಂದು ಕೆರೆ ಸೇರಿದಂತೆ ಒಟ್ಟು 39 ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲು 528.11 ಕೋಟಿ ರೂ. ಡಿಪಿಆರ್ ಸಿದ್ಧಪಡಿಸಲು ಆಡಳಿತಾತ್ಮಕ ಅನುಮೋದನೆ
- ಪುರಸಭೆಗಳ ಘನತ್ಯಾಜ್ಯ ನಿರ್ವಹಣೆಗೆ ಬೈಲಾ ರಚನೆ
- ಕಾವೇರಿ ನೀರಾವರಿ ನಿಗಮಕ್ಕೆ 250 ಕೋಟಿ ಹಣ ಸಂಗ್ರಹಕ್ಕೆ ಹಾಗೂ ವಿಶ್ವೇಶ್ವರ ಜಲ ನಿಗಮಕ್ಕೆ 730 ಕೋಟಿ ರೂ. ಅವಧಿ ಸಾಲ ಪಡೆಯಲು ಒಪ್ಪಿಗೆ
- ಆರನೇ ವೇತನ ಆಯೋಗದಂತೆ ಕೆಪಿಎಸ್ಸಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ವೇತನ ಪರಿಷ್ಕರಣೆಗೆ ಸಂಪುಟ ಸಮ್ಮತಿ