ಬೆಂಗಳೂರು: ಹಣಕಾಸಿನ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಾಗ ಹಲ್ಲೆ ನಡೆಸಲು ಮುಂದಾದ ಹಿನ್ನೆಲೆ ಆರೋಪಿ ಕಾಲಿಗೆ ಗುಂಡು ಹೊಡೆದು (police shot on accused leg) ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.
ಆರೋಪಿ ರಘು ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಹೆಣ್ಣೂರು ಪೊಲೀಸ್ ಠಾಣೆ (Hennur police station) ಪಿಎಸ್‌ಐ ಲಿಂಗರಾಜ್ ಎಂಬುವರು ಗಾಯಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಎಂಬುವರು ಎರಡು ದಿನಗಳ ಹಿಂದೆ ಕಾರಿನಲ್ಲಿ ನಾಗವಾರ ಸರ್ವೀಸ್ ರಸ್ತೆ ಕಡೆಗೆ ಹೋಗುವಾಗ ರಘು ಹಾಗೂ ಆತನ ಸಹಚರರು ಅಡ್ಡಗಟ್ಟಿದ್ದರು. ಈ ವೇಳೆ, ತಪ್ಪಿಸಿಕೊಂಡು ಹೋಗುವಾಗ ಬೆನ್ನಟ್ಟಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಇಂದು ಬೆಳ್ಳಿಗೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರ ಜಪ್ತಿ ಮಾಡಲು ಮುಂದಾಗಿದ್ದರು. ಇನ್ಸ್ಸ್ಪೆಕ್ಟರ್ ವಸಂತ್ ಹಾಗೂ ಪಿಎಸ್‌ಐ ಲಿಂಗರಾಜ್ ನೇತೃತ್ವದ ತಂಡ ರಿಕವರಿ ಮಾಡುತ್ತಿತ್ತು. ಈ ವೇಳೆ, ಆರೋಪಿ ರಘು ಪಿಎಸ್‌ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಶರಣಾಗುವಂತೆ ಗಾಳಿಯಲ್ಲಿ ಗುಂಡು ಹೊಡೆದು ಎಚ್ಚರಿಸಿದರೂ ಆರೋಪಿ ಹಲ್ಲೆಗೆ ಮುಂದಾಗಿದ್ದರಿಂದ ಪ್ರಾಣರಕ್ಷಣೆಗಾಗಿ ಸರ್ವೀಸ್ ಪಿಸ್ತೂಲ್ ನಿಂದ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.
ಸದ್ಯ ಆರೋಪಿ ಹಾಗೂ ಪಿಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಶ್ರೀಧರ್ ಕೊಲೆಗೆ ಹಳೆ ವೈಷ್ಯಮ ಹಾಗೂ ಹಣಕಾಸು ವಿಚಾರವೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರು ಇನ್ನಷ್ಟೇ ಹೆಚ್ಚಿನ ಮಾಹಿತಿ ಕಲೆಹಾಕಬೇಕಿದೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.