ಬೆಂಗಳೂರು: ಪಾಕ್ ಆಕ್ರಮಿತ ಕಾಶ್ಮೀರ ಮುಂದಿನ ಸ್ವಾತಂತ್ರ್ಯೋತ್ಸವದ ವೇಳೆಗೆ ಭಾರತದ ಭಾಗವಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನೆರವೇರಿಸಿ ಮಾತನಾಡಿದ ಅವರು, 370 ವಿಧಿ ರದ್ದುಗೊಳಿಸಿದ್ದರಿಂದ ಈ ಬಾರಿ ಕಾಶ್ಮೀರದಲ್ಲೂ ಸಂಭ್ರಮ ಹೆಚ್ಚಿದೆ. 370 ವಿಧಿ ಹೋಗಬೇಕೆಂಬುದು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸಾಗಿತ್ತು. ಅದು ಇಂದು ಸಾಕಾರವಾಗಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಈ ದಿಟ್ಟ ತೀರ್ಮಾನ ಕೈಗೊಂಡಿದ್ದಾರೆ ಎಂದರು.
ಅಮಿತ್ ಶಾ ಅವರು ಸಂಸತ್ತಿನಲ್ಲಿ ಮೊನ್ನೆ ಖುಷಿಯ ಸುದ್ದಿಯನ್ನು ತಿಳಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶ ಭಾರತದ ಭಾಗ ಆಗಬೇಕು ಎಂಬುದನ್ನು ಅವರು ಹೇಳಿದ್ದಾರೆ. ಹೀಗಾಗಿ ಬರುವ ವರ್ಷದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಎಂಬ ಪದವೇ ಇರಲ್ಲ. ಅದು ಮತ್ತೆ ಭಾರತದ ಭಾಗವಾಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಒಂದು ದೇಶ, ಒಂದು ಧ್ವಜ ಪರಿಕಲ್ಪನೆ ಸಾಕಾರ:
ಧ್ವಜಾರೋಹಣ ಮಾಡಿ ಮಾತನಾಡಿದ ಮಾಜಿ ಡಿಸಿಎಂ ಆರ್.ಅಶೋಕ್, 370 ವಿಧಿ ರದ್ದುಗೊಳಿಸುವ ಮೂಲಕ ಕಾಶ್ಮೀರದಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಕಳೆಗಟ್ಟುವ ಹಾಗೆ ಪ್ರಧಾನಿ ಮೋದಿ ಮಾಡಿದ್ದಾರೆ. ದೇಶದ ಜನ ಇದಕ್ಕಾಗಿ ಬಹಳ ವರ್ಷಗಳಿಂದಲೇ ಕಾಯುತ್ತಿದ್ದರು. ಇದೀಗ ಒಂದು ದೇಶ, ಒಂದು ಧ್ವಜ ಎಂಬ ಪರಿಕಲ್ಪನೆ ಸಾಕಾರವಾಗಿದೆ. ಇದು ಮೋದಿಯವರ ಧೈರ್ಯ ಮತ್ತು ಸಾಹಸದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ನಡೆದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ರವಿ ಕುಮಾರ್, ಬಿಜೆಪಿ ಸ್ಟಾರ್ ಪ್ರಚಾರಕಿ, ನಟಿ ಶೃತಿ ಸೇರಿದಂತೆ ಪಕ್ಷದ ನಾಯಕರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ನಟಿ ಶೃತಿ ಹಾಗೂ ಮಹಿಳಾ ಕಾರ್ಯಕರ್ತೆಯರು ಆರ್.ಅಶೋಕ್ಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು.