ಬೆಂಗಳೂರು: ನೂತನ ಸಚಿವ ಆನಂದ್ ಸಿಂಗ್‌ಗೆ ಅರಣ್ಯ ಖಾತೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ವಕೀಲ ವಿಜಯಕುಮಾರ್ ಎಂಬುವರು ಈ ಪಿಐಎಲ್ ಅರ್ಜಿ ಸಲ್ಲಿಸಿದ್ದು, ಸಚಿವ ಆನಂದ್ ಸಿಂಗ್ ವಿರುದ್ಧ ಅರಣ್ಯ ಇಲಾಖೆಯೇ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆ. ರಾಜ್ಯ ಹೈಕೋರ್ಟ್ನಲ್ಲಿಯೂ ಕೆಲವು ಅರ್ಜಿಗಳು ವಿಚಾರಣೆ ಹಂತದಲ್ಲಿವೆ. ಅಲ್ಲದೆ ಆನಂದ್ ಸಿಂಗ್ ಕುಟುಂಬ ಗಣಿಗಾರಿಕೆಯಲ್ಲಿ ಭಾಗಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹೀಗಾಗಿ ನೂತನ ಅರಣ್ಯ ಸಚಿವ ಆನಂದ್ ಸಿಂಗ್ ಇಲಾಖೆಯಲ್ಲಿ ಯಾವುದೇ ಕಾರ್ಯನಿರ್ವಹಿಸದಂತೆ ತಡೆ ನೀಡಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಆನಂದ್ ಸಿಂಗ್ ಅವರನ್ನು ಅರಣ್ಯ ಇಲಾಖೆಗೆ ಸಚಿವರನ್ನಾಗಿ ನೇಮಕ ಮಾಡಿರುವ ಕ್ರಮ ಅನೂರ್ಜಿತಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಚಿವ ಆನಂದ್ ಸಿಂಗ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನೂ ವಿಚಾರಣೆಗೆ ನಿಗದಿಯಾಗಬೇಕಿದೆ.