ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಪೂರ್ವ ಗೇಟ್ ಬಳಿಯ ಅಂಬೇಡ್ಕರ್ ಪ್ರತಿಮೆ ಬಳಿ ಹಾಗೂ ಬ್ಯಾಂಕ್ವೆಟ್ ಹಾಲ್ನಲ್ಲಿ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದಲಿತ ಸಂಘಟನೆಗಳ ಕೆಲ ಕಾರ್ಯಕರ್ತರು ಅಂಬೇಡ್ಕರ್ ಫೋಟೋಗೆ ನ್ಯಾಯಾಧೀಶರೊಬ್ಬರು ಅವಮಾನ ಮಾಡಿರುವ ಬಗ್ಗೆ ಘೋಷಣೆ ಕೂಗಿದರು.
ನಂತರ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಷಣ ಮಾಡಲು ಮುಂದಾಗುತ್ತಿದ್ದಂತೆಯೇ ಸೋಮಣ್ಣ ಎಂಬುವವರು, ಕೋವಿಡ್ನಿಂದ ತುಂಬಾ ತೊಂದರೆಗೆ ಒಳಗಾಗಿದ್ದೇವೆ. ತಮ್ಮ ನೆರವಿಗೆ ಬರಬೇಕು. ಜೊತೆಗೆ ಪಿಟಿಸಿಎಲ್ ಕಾಯ್ದೆಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಾ ವೇದಿಕೆ ಬಳಿ ಬಂದರು. ಅವರಿಗೆ ಹಲವು ಮುಖಂಡರು ದನಿ ಗೂಡಿಸಿದಾಗ ಗದ್ದಲದ ವಾತಾವರಣ ಉಂಟಾಯಿತು.
ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ನೀಡದಿರುವುದು ಕೆಟ್ಟ ಸಂಪ್ರದಾಯ: ಯು.ಟಿ.ಖಾದರ್
'ಸೋಮಣ್ಣ ಇದು ಪ್ರತಿಭಟನೆ ಮಾಡುವ ವೇದಿಕೆಯಲ್ಲ, ನಿಮ್ಮ ಬೇಡಿಕೆ ಈಡೇರಿಸುತ್ತೇನೆ' ಎಂದು ಮುಖ್ಯಮಂತ್ರಿಗಳು ಹೇಳಿದರು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ಹೊರಗೆ ಕರೆದೊಯ್ದರು. ನಂತರ ಸಿಎಂ ತಮ್ಮ ಭಾಷಣ ಮುಂದುವರಿಸಿದರು. ಕಾರ್ಯಕ್ರಮ ಮುಗಿಸಿ ಮುಖ್ಯಮಂತ್ರಿಗಳು ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸಹ ವಿಧಾನಸೌಧದ ಪೂರ್ವ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು.