ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯನನ್ನು ನಿನ್ನೆ ಉಪ್ಪಾರಪೇಟೆ ಪೊಲೀಸರು ನಿನ್ನೆ ಬಂಧಿಸಿದ್ದರು. ಬಳಿಕ ಪೊಲೀಸರು ನಡೆಸಿದ್ದ ವಿಚಾರಣೆಯಲ್ಲಿ ಆಕೆ ಸ್ವಇಚ್ಚಾ ಹೇಳಿಕೆ ನೀಡಿದ್ದಾಳೆ.
ಪಾಕ್ಗೆ ಜಿಂದಾಬಾದ್ ಕೂಗಲು ಕಾರಣವೇನು?: ಘೋಷಣೆ ಕೂಗಿದ ನಂತರ ಬೆಳವಣಿಗೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾಳೆ. ಈ ಮಾಹಿತಿ ಈಟಿವಿ ಭಾರತ್ಗೆ ಲಭ್ಯವಾಗಿದೆ. ಆಕೆ ಹೇಳಿಕೆ ನೀಡಿರುವುದು ಯಥಾವತ್ ಇಲ್ಲಿ ಬರೆಯಲಾಗಿದೆ.
'ಅಮೂಲ್ಯ ಲಿಯೋನ ಆದ ನಾನು ಜಯನಗರದ ಎನ್ಎಂಕೆಆರ್ವಿ ಕಾಲೇಜಿನಲ್ಲಿ ಬಿಎ-2ನೇ ವರ್ಷದ ಪತ್ರಿಕೋದ್ಯಮ, ಇಂಗ್ಲೀಷ್ ಮತ್ತು ಮನಃಶಾಸ್ತ್ರದ ವ್ಯಾಸಾಂಗ ಮಾಡುತ್ತಿದ್ದೇನೆ. ಇದರ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಅನುವಾದಕಿಯಾಗಿ ಒಂದು ವರ್ಷದಿಂದ ಕೆಲಸ ಮಾಡಿಕೊಂಡಿರುತ್ತೇನೆ. ಈಗ ನ್ಯೂಯಾರ್ಕ್ ಟೈಮ್ಸ್ ಲೇಖಕರಿಗೋಸ್ಕರ ಕೆಲಸ ಮಾಡುತ್ತಿದ್ದೇನೆ'.
ನಾನು ಸತತ ಎರಡು ತಿಂಗಳಿಂದ ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ಜೊತೆಗೆ ವಿದ್ಯಾರ್ಥಿಗಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಹೋರಾಡುತ್ತಿದ್ದೇನೆ. ಈ ಮೊದಲು ಕೂಡ ಭೂಮಿ, ವಸತಿಗಾಗಿ ಹೋರಾಟ, ಲಂಚ ಮುಕ್ತ ಕರ್ನಾಟಕ ಹೋರಾಟ, ಹವಾಮಾನ ಬದಲಾವಣೆ ವಿರುದ್ಧದ ಹೋರಾಟ, ಶರಾವತಿ ವಿರುದ್ಧ ಹೋರಾಟ ಸೇರಿ ಇತರೆ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ.
ಈ ವಿಚಾರದ ಬಗ್ಗೆ ಮಾತನಾಡಲು ನನಗೆ ಸಮಾಜದಲ್ಲಿ ಆಗುತ್ತಿರುವ ಘಟನೆಗಳು ಪ್ರೇರಣೆಯಾಗಿದ್ದವು. ಗೌರಿ ಲಂಕೇಶ್ ಹತ್ಯೆ, ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ, ಅಲಿ ವಿಶ್ವವಿದ್ಯಾಲಯ, ಜೆಎನ್ಯು ವಿವಿ ಶೃಂಗೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪೆಟ್ರೋಲ್ ಬಾಂಬ್ ಸಿಡಿಸುವ ಬೆದರಿಕೆ, ಮಂಗಳೂರು ಗೋಲಿಬಾರ್, ಬೆಂಗಳೂರಿನಲ್ಲಿ ಇಬ್ಬರು ಕಾರ್ಮಿಕರು ಸೆಪ್ಟಿಕ್ ಟ್ಯಾಂಕ್ ಪ್ರವೇಶಿಸಿ ಸಾವನ್ನಪ್ಪಿದ ಘಟನೆಗಳು. ಅದೇ ರೀತಿ ಸಮಾಜದಲ್ಲಿ ಬಡವರ ಮೇಲಾದ ದೌರ್ಜನ್ಯದ ವಿರುದ್ಧ ಹೋರಾಟ ಪ್ರಾರಂಭಿಸಿದ್ದೇನೆ.
ಸಿಎಎ,ಎನ್ಆರ್ಸಿ ಮತ್ತು ಎನ್ಪಿಆರ್ ಹಾಗೂ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹಲವಾರು ವೇದಿಕೆಯಲ್ಲಿ ಮಾತನಾಡಿದ್ದೇನೆ. ಡಿ.15 ರಂದು ಜಾರಿಗೊಳಿಸಿದ್ದ ಸೆಕ್ಷನ್ 144 ಬೇಧಿಸಿ ಟೌನ್ಹಾಲ್ ಮುಂದೆ ಪ್ರತಿಭಟಿಸಿದಕ್ಕೆ ನನ್ನನ್ನ ಡಿಟೇನ್ ಮಾಡಿದ್ರು. ಬಳಿಕ ವಿಧಾನಸೌಧದ ಮುಂದೆ ಕೇಂದ್ರ ಸರ್ಕಾರದ ವಿರುದ್ಧ ಒಬ್ಬಂಟಿಯಾಗಿ ಪೋಸ್ಟರ್ ಹಿಡಿದಿದ್ದ ಕಾರಣ ಪೊಲೀಸರು ನನ್ನನ್ನ ಬಂಧಿಸಿದ್ದರು.
* ಫ್ರೀಡಂಪಾರ್ಕ್ನಲ್ಲಿ, ಸರ್ಕಾರಿ ಕಾಲೇಜಿನಲ್ಲಿ (ಸೆಂಟ್ರಲ್), ಹೆಚ್‌ಎಂಟಿ ಲೇಔಟ್, ಶಿವಾಜಿನಗರ ಚೌಕದಲ್ಲಿ, ವಿಜಯನಗರ ಚೌಕದಲ್ಲಿ ಎನ್ಆರ್ಸಿ ವಿರೋಧಿಸಿ ಭಾಷಣ ಮಾಡಿದ್ದೇನೆ.
* ಫ್ರೀಡಂಪಾರ್ಕ್ನಲ್ಲಿ ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ನನ್ನ ಗೆಳತಿ ಹಾಗೂ ಹೋರಾಟಗಾರ್ತಿ ತೆರೇಸಾ ಕೇಳಿದಾಗ ಅದಕ್ಕೆ ಸಮ್ಮತಿ ನೀಡಿದ್ದೆ. ವೇದಿಕೆಯಲ್ಲಿ ನಂತರ ಸೈಯದ್ ಆರ್ಯನ್ ಎಂಬುವರು ನನ್ನನ್ನು ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಲು ಆಹ್ವಾನ ನೀಡಿದರು. ಹೀಗಾಗಿ ಇಂದು ಸಂಜೆ (ಅಂದರೆ ನಿನ್ನೆ) 4 ಗಂಟೆಗೆ ಪ್ರತಿಭಟನಾ ಸ್ಥಳಕ್ಕೆ ತಲುಪಿದ್ದೆ.
* ಪ್ರತಿಭಟನೆಯಲ್ಲಿ ನನಗೆ ಮಾತನಾಡುವ ಸರದಿಯನ್ನ ಆಯೋಜಕರು ನೀಡಿದರು. ಕಾರ್ಯಕ್ರಮದ ಮುಖ್ಯನಿರೂಪಕರು ಮುಖ್ಯ ಅತಿಥಿ ಅಸಾದುದ್ದೀನ್ ಬಂದ ನಂತರ ಮಾತನಾಡಲು ಅವಕಾಶ ನೀಡಿದರು.
* ನಾನು ನನ್ನ ಭಾಷಣವನ್ನು 'ಪಾಕಿಸ್ತಾನ ಜಿಂದಾಬಾದ್' ಎಂದು ಮೂರು ಬಾರಿ ಹೇಳಿ 'ಹಿಂದೂಸ್ತಾನ್ ಜಿಂದಾಬಾದ್' ಎಂದು ಮೂರು ಬಾರಿ ಹೇಳಿ ಭಾಷಣ ಆರಂಭಿಸಿದೆ. ಇದರಿಂದ ಆಕ್ರೋಶಗೊಂಡ ಆಯೋಜಕರು ಮತ್ತು ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು, ನನ್ನಿಂದ ಮೈಕ್ ಕಸೆಯುವ ಪ್ರಯತ್ನ ಮಾಡಿದರು. ನಾನು ಎಷ್ಟೇ ವಿನಯತೆಯಿಂದ ಮಾತು ಮುಗಿಸಲು ಅವಕಾಶ ನೀಡಿ ಎಂದರೂ ಮಾತನಾಡಲು ಬಿಡಲಿಲ್ಲ.
ಇದರ ನಂತರ ಸಭೆಯನ್ನುದ್ದೇಶಿಸಿ ಮೈಕ್ ಇಲ್ಲದೆ 'ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದೆ. ಜೊತೆಯಲ್ಲಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಸಹ ಹೇಳಿದೆ. ಇದರ ನಡುವೆ ಇರುವ ವ್ಯತ್ಯಾಸವೇನೆಂದರೆ.. ಇಷ್ಟು ಹೇಳುವಲ್ಲಿ ಆಯೋಜಕರು ಮತ್ತು ಪೊಲೀಸರು ಹಾಗೂ ಅಸಾದುದ್ದೀನ್ ಓವೈಸಿ ಅವರು ನಾನು ಇಂತಹ ಮಾತನ್ನ ಕೇಳಲು ಸಾಧ್ಯವಿಲ್ಲ ಎಂದು ಹೇಳಿ ನನ್ನನ್ನು ಸಭೆಯಿಂದ ಅಮಾನವೀಯವಾಗಿ ಕಳಿಸಿದ್ದಾರೆ. ಈ ನಡುವೆ ದಯವಿಟ್ಟು ನನ್ನ ಮಾತನ್ನ ಮುಗಿಸಲು ಅವಕಾಶ ಮಾಡಿಕೊಡಿ ಎಂದು ನಾನು ಎಲ್ಲರಲ್ಲೂ ಮನವಿ ಮಾಡಿಕೊಂಡೆ ಎಂದು ವಿಚಾರಣೆಯಲ್ಲಿ ಹೇಳಿದ್ದಾರೆ.