ಬೆಂಗಳೂರು: ಆಪರೇಷನ್ ಕಮಲಕ್ಕೆ ಅಕ್ರಮ ಹಣ ಬಳಕೆ ಆರೋಪ ಪ್ರಕರಣದ ವಿಚಾರಣೆ ನಡೆಸಿದ ಎನ್‌ಐಎ ಕೋರ್ಟ್ ವಾದ-ಪ್ರತಿವಾದ ಆಲಿಸಿ ಡಿ.12 ಕ್ಕೆ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದೆ.
ದೂರುದಾರರಾಗಿರುವ ವಕೀಲ ಬಾಲಕೃಷ್ಣನ್ ವಾದ ಮಂಡಿಸಿ, 17 ಅನರ್ಹ ಶಾಸಕರ ಖರೀದಿಗೆ ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಒಳಸಂಚು ಮಾಡಿ ಅಸ್ತಿತ್ವದಲ್ಲಿದ್ದ ಸರ್ಕಾರವನ್ನು ಬೀಳಿಸಿದ್ದಾರೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಶಕ್ತಿಗಳಿಂದ ಹಣ ಬರುತ್ತಿದೆ. ಹೀಗಾಗಿ ಎನ್‌ಐಎ ತನಿಖೆ ನಡೆಸಲು ಆದೇಶಿಸುವಂತೆ ಮನವಿ ಮಾಡುತ್ತೇನೆ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಮೂರ್ತಿಗಳು ಡಿ.12 ಕ್ಕೆ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಹಿಂದಿನ ಸಮ್ಮಿಶ್ರ ಸರ್ಕಾರವನ್ನು ಅಪರೇಷನ್ ಕಮಲದ ಮೂಲಕ ಬೀಳಿಸಲಾಗಿದ್ದು, ಅದಕ್ಕೆ ಅಕ್ರಮ ಹಣ ಬಳಕೆ ಮಾಡಲಾಗಿದೆ ಎಂಬ ಆರೋಪವಿದೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಎನ್‌ಐಎ ತನಿಖೆ ಮಾಡುವಂತೆ ಕೋರಿ ವಕೀಲ ಬಾಲಕೃಷ್ಣನ್ ಖಾಸಗಿ ದೂರು ಸಲ್ಲಿಸಿದ್ದರು. 17 ಮಂದಿ ಅನರ್ಹ ಶಾಸಕರ ಖರೀದಿಗೆ ಸಾವಿರ ಕೋಟಿ ಖರ್ಚು ಮಾಡಲಾಗಿದೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಶಕ್ತಿಗಳಿಂದ ಹಣ ಬರುತ್ತಿದೆ. ಹೀಗಾಗಿ ಎನ್‌ಐಎ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು.