ಬೆಂಗಳೂರು : ನಾಳೆಯಿಂದ 10 ದಿನಗಳ ಕಾಲ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದೆ. ಆದ್ರೆ, ಅಧಿವೇಶನಕ್ಕೆ ಒಮ್ರಿಕಾನ್ ಆತಂಕ ಕಾಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮೂರನೇ ಪ್ರಕರಣ ಪತ್ತೆಯಾಗುವ ಮೂಲಕ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದರೆ, ಇನ್ನೊಂದೆಡೆ ಚಳಿಗಾಲದ ಅಧಿವೇಶನ ನಡೆಯಬೇಕಿರುವ ಬೆಳಗಾವಿಗೆ ಅತ್ಯಂತ ಸಮೀಪದಲ್ಲಿರುವ ಮಹಾರಾಷ್ಟ್ರ ರಾಜ್ಯದಲ್ಲಿ 17 ಪ್ರಕರಣ ಪತ್ತೆಯಾಗಿವೆ.
ಸಚಿವರು, ಶಾಸಕರು, ವಿಧಾನಸೌಧ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಜೊತೆಗೆ ಭದ್ರತೆಗೆ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿ, ವಿವಿಧ ರಾಜಕೀಯ ನಾಯಕರನ್ನು ಭೇಟಿಯಾಗಲು ಆಗಮಿಸುವ ಬೆಂಬಲಿಗರ ಸಂಖ್ಯೆಯೂ ನೂರಾರು ಸಂಖ್ಯೆಯಲ್ಲಿದೆ.
ಇದೆಲ್ಲದರ ಜೊತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸುವವರು ಹಾಗೂ ವಿವಿಧ ಹಂತದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಪಕ್ಷ ನಾಯಕರು ಹಾಗೂ ಸದಸ್ಯರು ಕೈಗೊಂಡಿರುವ ಹೋರಾಟದಲ್ಲಿ ಭಾಗಿಯಾಗುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಸೇರುವ ಸ್ಥಳದಲ್ಲಿ ಮಾರಕ ವೈರಸ್ ಒಮ್ರಿಕಾನ್ ಹರಡುವ ಆತಂಕ ಹೆಚ್ಚಾಗುತ್ತಿದೆ.
ಕೆಲ ನಾಯಕರಿಗೆ ಅಧಿವೇಶನ ಬೆಳಗಾವಿಯಲ್ಲಿ ನಡೆಯುವುದು ಅಷ್ಟಾಗಿ ಇಷ್ಟವಿರಲಿಲ್ಲ. ವಿಧಾನಸೌಧ ಸಚಿವಾಲಯ ಸಿಬ್ಬಂದಿ ಈ ವಿಚಾರವಾಗಿ ಸರ್ಕಾರಕ್ಕೂ ಮನವಿ ಮಾಡಿ ಅಧಿವೇಶನ ನಡೆಸದಂತೆ ಒತ್ತಾಯ ಮಾಡಿದ್ದರು. ಆದರೆ, ವಿಧಾನ ಪರಿಷತ್ ಚುನಾವಣೆಗೆ ಸಾಕಷ್ಟು ಜನರನ್ನು ಸೇರಿಸಿ ಸಮಾವೇಶ ನಡೆಸಿದ್ದ ಸರ್ಕಾರಕ್ಕೆ ಅಧಿವೇಶನ ತಡೆದರೆ ಸಮಸ್ಯೆಯಾಗುತ್ತದೆ ಎಂಬ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ಹಮ್ಮಿಕೊಂಡಿದೆ.
ಇದನ್ನೂ ಓದಿ: ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧ ಸಂಪೂರ್ಣ ಸಜ್ಜು
ಮುಂದೂಡುವುದಕ್ಕೆ ಕಡೆಯ ಕ್ಷಣದವರೆಗೂ ಸಾಕಷ್ಟು ಕಾರಣಗಳನ್ನು ಹುಡುಕಿದ ಸರ್ಕಾರಕ್ಕೆ ಸೂಕ್ತ ವಿಚಾರ ದೊರೆಯಲಿಲ್ಲ. ಈಗಲೂ ಅಧಿವೇಶನವನ್ನು ಮೊಟಕುಗೊಳಿಸುವ ಉತ್ಸಾಹದಲ್ಲಿಯೇ ಇರುವ ಸರ್ಕಾರ ಕಾರಣಕ್ಕಾಗಿ ಹುಡುಕುತ್ತಿದೆ. ಒಮ್ರಿಕಾನ್ ವಿಚಾರ ಮುಂದಿಟ್ಟು ಮೊದಲ ವಾರಾಂತ್ಯಕ್ಕೆ ಅಧಿವೇಶನವನ್ನು ಮುಂದೂಡುವ ಸಂಬಂಧ ಯೋಚನೆ ಮಾಡುತ್ತಿದೆ ಎನ್ನಲಾಗುತ್ತಿದೆ. ಎಷ್ಟರ ಮಟ್ಟಿಗೆ ಇದಕ್ಕೆ ಅವಕಾಶ ಒದಗಿ ಬರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.