ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಆರ್ಥಿಕ ಪ್ಯಾಕೇಜ್‌ನ ಮೊದಲ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ, ಸ್ಥಳೀಯವಾಗಿ ಬ್ರಾಂಡ್ ನಿರ್ಮಿಸುವ ಉದ್ದೇಶವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸ್ವಾವಲಂಬಿ ಭಾರತ ಅಭಿಯಾನದ ಮೂಲಕ ದೇಶದ ಆರ್ಥಿಕತೆಗೆ ಒತ್ತು ನೀಡಿ, ಬಡ ಮತ್ತು ಮಧ್ಯಮ ವರ್ಗದ ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಮಹತ್ತರ ಹೆಜ್ಜೆ ಇದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಕೆಲ ದಿನಗಳವರೆಗೆ ಪ್ರತಿದಿನ ಹಲವು ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ನೀಡುವ ಕೊಡುಗೆಗಳನ್ನು ಘೋಷಿಸಲಿದ್ದಾರೆ. ಮೊದಲ ದಿನ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಉದ್ಯಮಗಳು (ಎಂ.ಎಸ್.ಎಂ.ಇ.) ಮತ್ತು ಗುಡಿ ಮತ್ತು ಕುಶಲ ಕರ್ಮಿಗಳ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡುವ ಕೊಡುಗೆಗಳನ್ನು ಪ್ರಕಟಿಸಿದ್ದಾರೆ ಎಂದರು.
ತುರ್ತು ಆರೋಗ್ಯ ನಿಧಿಗಾಗಿ 15 ಸಾವಿರ ಕೋಟಿ, ಸಣ್ಣ ಉದ್ಯಮ ಕ್ಷೇತ್ರಕ್ಕೆ 3 ಲಕ್ಷ ಕೋಟಿ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್.ಬಿ. ಎಫ್.ಸಿ.) 45 ಸಾವಿರ ಕೋಟಿ ಮತ್ತು ವಿದ್ಯುತ್ ವಿತರಣಾ ಸಂಸ್ಥೆಗಳಿಗೆ 90 ಸಾವಿರ ಕೋಟಿ ರೂಪಾಯಿಗಳ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದರ ಜೊತೆಯಲ್ಲಿ ಸದ್ಯದ ಲಾಕ್ಡೌನ್ನಿಂದಾಗಿ ತೊಂದರೆಯಲ್ಲಿರುವ ಸಣ್ಣ ಉದ್ಯಮಗಳಿಗೆ ಹೂಡಿಕೆ ಮಿತಿಯಲ್ಲಿ ಹೆಚ್ಚಳ, ತೆಗೆದುಕೊಂಡ ಸಾಲಕ್ಕೆ ಸರ್ಕಾರದ ಸೆಕ್ಯುರಿಟಿ, ದೇಶೀಯ ಗುತ್ತಿಗೆದಾರರಿಗೆ ಅನುಕೂಲ ಆಗುವಂತೆ ಟೆಂಡರ್ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆ, ಉದ್ಯಮಿಗಳ ಬಾಕಿ ಹಣ ಬಿಡುಗಡೆಗೆ ಕಾಲ ಮಿತಿ, ಸರ್ಕಾರದಿಂದ ಪಿಎಫ್ ಹಣ ನೀಡುವುದು, ಮೊದಲಾದ ಆರ್ಥಿಕ ಪುನಶ್ವೇತನದ ಕಾಮಗಾರಿಗಳನ್ನು ಅವರು ಘೋಷಿಸಿದ್ದಾರೆ.
ಇದೇ ರೀತಿ ಮುಂದಿನ ಕೆಲ ದಿನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಲಿರುವ ವಿಶೇಷ ಆರ್ಥಿಕ ಪ್ಯಾಕೇಜ್ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಪಾತ್ರ ವಹಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಕಟೀಲ್ ತಿಳಿಸಿದ್ದಾರೆ.