ಬೆಂಗಳೂರು: ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಸಿ ಮೆಕ್ಯಾನಿಕ್ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಜೆ ಹಳ್ಳಿ ಠಾಣಾ ಪೊಲೀಸರು ಮಹಿಳೆಯ ಪತಿ ಸೇರಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಬ್ರೇಜ್(ಪ್ರಮುಖ ಆರೋಪಿ), ನಿಜಾಮ್ ಹಾಗೂ ಅಲಿ ಬಂಧಿತರು. ಮೇ 30ರಂದು ಶ್ಯಾಂಪುರ ರೈಲ್ವೇ ಗೇಟ್ ಬಳಿ ಎಸಿ ಮೆಕ್ಯಾನಿಕ್ ಸುಭಾನ್ ಎಂಬಾತನನ್ನು ಆರೋಪಿಗಳು ಹತ್ಯೆಗೈದಿದ್ದರು. ಹೀಗಾಗಿ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿನ ತಂಡ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ತನಿಖೆ ವೇಳೆ ಆರೋಪಿ ತಬ್ರೇಜ್ನ ಪತ್ನಿಯೊಂದಿಗೆ ಸುಭಾನ್ ಅಕ್ರಮ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ಇಷ್ಟು ಮಾತ್ರವಲ್ಲದೇ ತಬ್ರೇಜ್ನ ಪತ್ನಿಯನ್ನು ತುಮಕೂರಿಗೆ ಕರೆದೊಯ್ದು ವಾಸವಿದ್ದ.
ಇದರಿಂದ ರೊಚ್ಚಿಗೆದ್ದ ತಬ್ರೇಜ್ ಬಹಳಷ್ಟು ಬಾರಿ ಸುಭಾನ್ಗೆ ಎಚ್ಚರಿಕೆ ನೀಡಿದ್ದ. ಆದರೂ ಮಾತು ಕೇಳದೆ ತನ್ನ ಹೆಂಡತಿ ಜೊತೆ ಸಂಬಂಧ ಹೊಂದಿದ್ದ ಕಾರಣ ಸುಭಾನ್ ವಿಳಾಸ ಪತ್ತೆ ಮಾಡಿ ಕಾರಿನಲ್ಲಿ ಮೊದಲು ಕಿಡ್ನ್ಯಾಪ್ ಮಾಡಿಕೊಂಡು ತುಮಕೂರಿನಿಂದ ಬೆಂಗಳೂರಿಗೆ ಕರೆತಂದಿದ್ದಾನೆ. ಬಳಿಕ ಶ್ಯಾಂಪುರ ಗೇಟ್ ಬಳಿ ಆತನನ್ನು ಕೊಲೆಗೈದು ಶವ ಎಸೆದು ಪರಾರಿಯಾಗಿದ್ದ. ಈ ಸಂಬಂಧ ಸದ್ಯ ಡಿ ಜೆ ಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.