ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಡದಿದಕ್ಕೆ ಮುನಿಸಿಕೊಂಡಿದ್ದ ಸಚಿವ ಎಂಟಿಬಿ ನಾಗರಾಜ್ಗೆ ಆರ್.ಅಶೋಕ್ ಅವರ ಬಳಿ ಇದ್ದ ಉಸ್ತುವಾರಿಯನ್ನ ಪಡೆದಿದ್ದಾರೆ. ಆದರೂ ಸಮಾಧಾನಗೊಳ್ಳದ ಅವರು ಈಗ ಪ್ರಬಲ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಹೊಸಕೋಟೆ ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ನೀಡಲಾಗಿದ್ದ ಐದು ಸಾವಿರ ಫುಡ್ ಕಿಟ್‌ಗಳನ್ನ ಪೋಸ್ಟ್ ಮಾಸ್ಟರ್ ಮತ್ತು ಪೋಸ್ಟ್ ಮ್ಯಾನ್ಗಳಿಗೆ ಸಚಿವ ಎಂಟಿಬಿ ನಾಗರಾಜ್ ನೀಡುವ ಮೂಲಕ ಚಾಲನೆ ನೀಡಿದರು. ನಾಳೆಯಿಂದ ಕಟ್ಟಡ ಕಾರ್ಮಿಕರಿಗೆ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಿತರಣೆ ಮಾಡುವುದಾಗಿ ಹೇಳಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಇದಕ್ಕೂ ಮೊದಲು ನನಗೆ ಸಿಎಂ ಅವರು ಕೋಲಾರ ಜಿಲ್ಲೆಯ ಉಸ್ತುವಾರಿ ನೀಡಿದ್ದರು. ನಾನು ಹೊಸಕೋಟೆಯಲ್ಲಿ ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವನಾಗಿ, ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಆಗಿ ಕೆಲಸ ಮಾಡಿರುವ ಅನುಭವ ಇದೆ. ನನಗೆ ಬೆಂ.ಗ್ರಾ ಜಿಲ್ಲೆಯನ್ನೇ ನೀಡಿ. ಇಲ್ಲಿನ ನಾಡಿಮಿಡಿತ ಮತ್ತು ಪಕ್ಷ ಸಂಘಟನೆ ಬಗ್ಗೆ ಹೆಚ್ಚು ಅನುಭವ ಇದೆ. ಕೊಟ್ಟರೆ ಇದನ್ನೇ ಕೊಡಿ ಇಲ್ಲದಿದ್ದರೆ ಯಾವುದು ಬೇಡ ಎಂದಿದ್ದೆ. ಆದರಿಂದ ಕೋಲಾರ ಜಿಲ್ಲೆ ವಾಪಸ್ ತೆಗೆದುಕೊಂಡು ನಿನ್ನೆ ಸಿಎಂ ಅವರು ಮತ್ತು ನಮ್ಮ ಎಲ್ಲಾ ನಾಯಕರು ಸೇರಿ ನನಗೆ ಉಸ್ತುವಾರಿ ವಹಿಸಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಜೊತೆಗೆ ಖಾತೆ ಬದಲಾವಣೆ ಮಾಡಿಕೊಡಿ ಎಂದು ಮುಖ್ಯಮಂತ್ರಿಗಳ ಬಳಿ ಕೇಳಿಕೊಂಡೆ. ಆದರೆ ಒಂದು ಮಾಡಿದ್ದಾರೆ ಇನ್ನೊಂದು ಮಾಡಿಲ್ಲ. ಅದನ್ನು ಕೆಲವು ದಿನಗಳಲ್ಲಿ ಮಾಡಿಕೊಡುವುದಾಗಿ ಹೇಳಿದ್ದಾರೆ. ಆದರೆ ಯಾವುದೇ ಖಾತೆ ನೀಡಿದರೂ ಪರವಾಗಿಲ್ಲ, ಜನರ ಸೇವೆ ಮಾಡುತ್ತೇನೆ. ಈ ಮೊದಲು ವಸತಿ ಸಚಿವನಾಗಿದ್ದೆ. ಅದಕ್ಕೂ ಉತ್ತಮವಾದ ಖಾತೆ ನೀಡುವುದಾಗಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ. ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಆದಷ್ಟು ಬೇಗ ಖಾತೆ ಬದಲಾವಣೆ ಮಾಡಿಕೊಡುವ ನಿರೀಕ್ಷೆಯಿದೆ. ಉಸ್ತುವಾರಿ ನೀಡಿರುವ ಕಾರಣ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಓಡಾಡುತ್ತೇನೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಗೆಲುವನ್ನು ಸಾಧಿಸಲು ಉತ್ತಮ ರೀತಿಯಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.
ಆರ್.ಅಶೋಕ್ ಅವರು ಮೂರು ತಿಂಗಳ ಹಿಂದೆಯೇ ಉಸ್ತುವಾರಿ ಸಚಿವ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದ್ದರು. ಸಿಎಂಗೆ ಪತ್ರನೂ ಬರೆದಿದ್ದರು. ಅದೇ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದರು.
ಸಚಿವ ಸಿ ಪಿ ಯೋಗೇಶ್ವರ್ ಬಗ್ಗೆ ನನಗೆ ಗೊತ್ತಿಲ್ಲ, ಮುಂದಿನ ದಿನಗಳಲ್ಲಿ ಅವರಿಗೂ ಉತ್ತಮ ಖಾತೆ ಸಿಗಬಹುದು. ಕೋಲಾರ ನೀಡುವುದಾಗಿ ಹೇಳುತ್ತಿದ್ದಾರೆ. ಮಾತುಕತೆ ನಡೆಯುತ್ತಿದೆ ಎಂದು ಎಂಟಿಬಿ ತಿಳಿಸಿದರು.