ಹೊಸಕೋಟೆ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮುಂದೆ ಬಚ್ಚೇಗೌಡರು ನನಗೆ ಹೊಸಕೋಟೆ ಕ್ಷೇತ್ರದ ಟಿಕೆಟ್ ನೀಡಲು ಒಪ್ಪಿಗೆ ಸೂಚಿಸಿದ ನಂತರವೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಎಂಟಿಬಿ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.
ಹೊಸಕೋಟೆಯಲ್ಲಿ ಮಾತನಾಡಿದ ಎಂಟಿಬಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಟಿಕೆಟ್ ನನಗೆ ನೀಡಲು ಸಂಸದ ಬಚ್ಚೇಗೌಡ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂದೆಯೇ ಒಪ್ಪಿದ್ದರು. ಆದರೆ ಈಗ ಉಲ್ಟಾ ಹೊಡೆದು ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದಾರೆ.
ಸಂಸದ ಬಚ್ಚೇಗೌಡ ಪುತ್ರ ಶರತ್ಗೆ ದೊಡ್ಡಬಳಾಪುರದಲ್ಲಿ ಎಂಎಲ್ಎ ಟಿಕೆಟ್ ಕೊಡುತ್ತೀವಿ. ಅದು ಬೇಡ ಅಂದ್ರೆ, ಲೋಕಸಭಾ ಚುನಾವಣಾ ಟಿಕೆಟ್ ನೀಡುತ್ತೇವೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದರು ಎಂದು ಎಂಟಿಬಿ ಹೇಳಿದ್ದಾರೆ.
ನಾನು, ಬಚ್ಚೇಗೌಡ ಮತ್ತು ಶರತ್ ಮೂವರು ಸೇರಿಕೊಂಡು ಹೊಸಕೋಟೆ ತಾಲೂಕನ್ನು ಅಭಿವೃದ್ಧಿಪಡಿಸಬೇಕೆಂದು ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಈಗ ಕೊಟ್ಟ ಮಾತನನ್ನು ಬಚ್ಚೇಗೌಡರು ತಪ್ಪುತ್ತಿದ್ದಾರೆ. ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡು ತನ್ನನ್ನು ಸೋಲಿಸಲು ಒಳ ಸಂಚು ಮಾಡಲಾಗಿದೆ ಎಂದು ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ವರ್ಸಸ್ ಬಚ್ಚೇಗೌಡ ಮಧ್ಯೆ ಬಿಕ್ಕಟ್ಟು ಮುಂದುವರಿದಿದ್ದು ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.