ಬೆಂಗಳೂರು: ನಾನು ತಾಳ್ಮೆಯಿಂದ ಕಾಯುತ್ತೇನೆ. ಸಿಎಂ, ರಾಜ್ಯಾಧ್ಯಕ್ಷರ ನಿರ್ಧಾರಕ್ಕೆ ನಾನು ಬದ್ಧ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಅವರು, ಮನುಷ್ಯನಿಗೆ ತಾಳ್ಮೆ, ಸಂಯಮ ಬಹಳ ಮುಖ್ಯ. ನಾನು ತಾಳ್ಮೆಯಿಂದ ಕಾಯುತ್ತೇನೆ. ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಅವರು ಈಗಾಗಲೇ ದೆಹಲಿಯಲ್ಲಿ ಚರ್ಚಿಸಿ ಬಂದಿದ್ದಾರೆ. ಯಾಕೆ ವಿಳಂಬವಾಗುತ್ತಿದೆ ಎಂಬುದನ್ನು ಸಿಎಂಗೆ ಕೇಳುವಷ್ಟು ದೊಡ್ಡವನಲ್ಲ ನಾನು ಎಂದರು.
ರಮೇಶ್ ಜಾರಕಿಹೊಳಿ ಅವರನ್ನು ನೀರಾವರಿ ವಿಚಾರವಾಗಿ ಭೇಟಿ ಮಾಡಿದ್ದೆ. ಅವರು ಸಂತೋಷ್ರನ್ನು ಭೇಟಿ ಮಾಡಿದ್ದರಲ್ಲಿ ತಪ್ಪೇನಿದೆ. ಸಂತೋಷ್ ಅವರೂ ನಮ್ಮ ಸಂಘಟನಾ ಪ್ರಧಾನ ಕಾರ್ಯದರ್ಶಿ. ನಾನೂ ದೆಹಲಿಗೆ ಹೋದರೆ ಅವರನ್ನು ಭೇಟಿಯಾಗಿ ಬರುತ್ತೇನೆ. ಅವರನ್ನು ಬಿಟ್ಟು ಇನ್ಯಾರನ್ನು ಭೇಟಿ ಮಾಡಬೇಕು ಎಂದು ಪ್ರಶ್ನಿಸಿದರು.
ಕೆಲ ಸಚಿವರನ್ನು ಸಂಪುಟದಿಂದ ಕೈ ಬಿಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಮತ್ತು ಅಧ್ಯಕ್ಷರಿಗೆ ಈ ಬಗ್ಗೆ ಏನು ಹೇಳಬೇಕೋ ಹೇಳಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ಸಚಿವರ ಪ್ರತ್ಯೇಕ ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿ, ನಾವು ಶಾಸಕರು ರೆಸಾರ್ಟ್ನಲ್ಲಿ ಸಭೆ ನಡೆಸಿಲ್ಲ. ಸಿಎಂ ಮತ್ತು ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇವೆ. ನಮ್ಮ ಅಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ಹೇಳಿದ್ದೇವೆ ಎಂದರು.