ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳ ಬಡ ಕುಟುಂಬದ ತಾಯಂದಿರಿಗೆ, ಹೆಣ್ಣುಮಕ್ಕಳಿಗೆ ಹಾಗೂ ಪುಟ್ಟ ಮಕ್ಕಳಿಗೆ ಪವಿತ್ರ ರಂಜಾನ್ ಹಬ್ಬ ಆಚರಣೆ ಸಹಾಯ ಹಸ್ತ ನೀಡಲು ಶಾಸಕ ಜಮೀರ್ ಖಾನ್ ಮುಂದಾಗಿದ್ದಾರೆ. ಇಂದು ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸ್ ಸ್ಟೇಷನ್ ಹತ್ತಿರದ ಮಸ್ತಾನ್ ಶಾ ಶಾದಿಮಹಲ್‌ನಲ್ಲಿ ಸಹಾಯ ಹಸ್ತ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರ್ಷಕ್ಕೊಮ್ಮೆ ಬರುವ ಪವಿತ್ರ ರಂಜಾನ್ ಹಬ್ಬದ ಸಮಯದಲ್ಲಿ ಹಬ್ಬ ಆಚರಣೆ ಮಾಡಿ ಪವಿತ್ರ ನಮಾಜ್ ವೇಳೆ ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಿ ಮತ್ತೊಮ್ಮೆ ತಪ್ಪು ಮಾಡದಂತೆ ಬುದ್ಧಿ ನೀಡಲೆಂದು ಅಲ್ಲಾನಲ್ಲಿ ಹಾಗೂ ದೇವರಲ್ಲಿ ಪ್ರಾರ್ಥಿಸುತ್ತೇನೆ. ಮನೆಯಲ್ಲಿ ದುಡಿಯುವ ಮಕ್ಕಳು ಅಥವಾ ಯಜಮಾನ ಇಲ್ಲದ ಹಿನ್ನೆಲೆ ಪವಿತ್ರ ರಮ್ಜಾನ್ ಹಬ್ಬ ಆಚರಣೆಗೆ ತಾಯಂದಿರಿಗೆ, ಹೆಣ್ಣುಮಕ್ಕಳಿಗೆ ಹಾಗೂ ಪುಟ್ಟ ಮಕ್ಕಳಿಗೆ ಸಹಾಯಹಸ್ತ ನೀಡಲಾಗುವುದು ಎಂದಿದ್ದಾರೆ.
ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ಏ.30ರ ವರೆಗೆ ವಾಸೀಂ ಪಠಾಣ್ಗೆ ನ್ಯಾಯಾಂಗ ಬಂಧನ
ನಾನು ಮೆಕ್ಕಾದಲ್ಲಿ ಪವಿತ್ರ ರಮ್ಜಾನ್ ಆಚರಣೆ ಸೇವೆಯಲ್ಲಿ ತೊಡಗಿಕೊಂಡಿರುವುದರಿಂದ ನಮ್ಮ ತಂಡದ ಸ್ನೇಹಿತರು ಆ ಕುಟುಂಬದ ತಾಯಂದಿರಿಗೆ ಮತ್ತು ಹೆಣ್ಣುಮಕ್ಕಳಿಗೆ ಫುಡ್ ಕಿಟ್ ಹಾಗೂ ಪ್ರತಿ ಕುಟುಂಬಕ್ಕೆ 5 ಸಾವಿರ ರೂ.ಗಳ ಧನ ಸಹಾಯ ಮಾಡಲಿದ್ದಾರೆ. ಈ ಸಹಾಯ ಹಸ್ತಕ್ಕೆ ಯಾವುದೇ ರೀತಿಯ ಬೇರೆ ಅರ್ಥ ಕಲ್ಪಿಸುವುದು ಬೇಡ. ತಪ್ಪು ಮಾಡಿದವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನೀಡುವ ಶಿಕ್ಷೆಗೆ ಒಳಪಡಲಿ ಎಂದು ಇದೇ ವೇಳೆ ಹೇಳಿದ್ದಾರೆ.