ಬೆಂಗಳೂರು: ಅಧ್ಯಕ್ಷರ ನೇಮಕವಾಗಿರುವ ಅಲ್ಪಸಂಖ್ಯಾತ ಆಯೋಗಕ್ಕೆ ಶೀಘ್ರವೇ ಸದಸ್ಯರ ನೇಮಕಕ್ಕೂ ಕಾಲ ಕೂಡಿ ಬರಲಿದೆ ಎಂಬ ಮಾಹಿತಿ ಲಭಿಸಿದೆ. ವಿಧಾನ ಪರಿಷತ್ನಲ್ಲಿ ಶುಕ್ರವಾರ ಸಚಿವ ಶ್ರೀಮಂತ ಪಾಟೀಲ್ ಈ ಸಂಬಂಧ ಮಾಹಿತಿ ಒದಗಿಸಿದ್ದು, ಕಾಂಗ್ರೆಸ್ ಸದಸ್ಯ ಹಾರರ್ ಮಸೇನ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.
ಅಲ್ಪಸಂಖ್ಯಾತರ ಆಯೋಗಕ್ಕೆ ಅಧ್ಯಕ್ಷರನ್ನು ಮಾತ್ರ ನೇಮಕ ಮಾಡಲಾಗಿದ್ದು, ಉಳಿದ ಎಂಟು ಸದಸ್ಯರ ನಾಮನಿರ್ದೇಶನ ಆದಷ್ಟು ಶೀಘ್ರವಾಗಿ ನಡೆಯಲಿದೆ. ಈ ಸಂಬಂಧ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಧರ್ಮಸಿಂಗ್ ಅವರು ಪರಿಷತ್ನಲ್ಲಿ ಆಯೋಗದ ಸದಸ್ಯರ ನೇಮಕವಾಗದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದರು. ಅಲ್ಲದೆ ಸದಸ್ಯರ ನೇಮಕ ಮಾಡದಿರುವುದರಿಂದ ಆಯೋಗದ ಕೆಲಸ ಕಾರ್ಯಗಳು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸಲು ತೊಂದರೆಯಾಗುವುದಿಲ್ಲ ಎಂದು ಕೂಡ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಸಚಿವರು ತೊಂದರೆಯಾಗುತ್ತಿರುವುದನ್ನು ಒಪ್ಪಿಕೊಂಡಿದ್ದು ಎಷ್ಟು ದಿನದಲ್ಲಿ ನೇಮಕವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದಷ್ಟು ಶೀಘ್ರವಾಗಿ ನೇಮಕವಾಗಲಿದೆ ಎಂದು ಭರವಸೆ ನೀಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆರ ವಿವರ ನೀಡಿದ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ, ಪ್ರಸ್ತುತ ರಾಜ್ಯದಲ್ಲಿ ಕೇಂದ್ರ ಪುರಸ್ಕೃತ 65,911 ಹಾಗೂ ರಾಜ್ಯ ಪುರಸ್ಕೃತ 350 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ವಿಧಾನಪರಿಷತ್ನಲ್ಲಿ ಸದಸ್ಯ ಅಬ್ದುಲ್ ಜಬ್ಬಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು ಮಾಸಿಕವಾಗಿ ಅಂಗನವಾಡಿ ಕಾರ್ಯಕರ್ತರಿಗೆ 10,000 ರೂ. ಹಾಗೂ ಅಂಗನವಾಡಿ ಸಹಾಯಕಿಯರಿಗೆ 6250 ರೂ. ಗೌರವ ಧನ ನೀಡುತ್ತಿದ್ದೇವೆ. ಇವರು ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ ಕೇಂದ್ರದಲ್ಲಿದ್ದು ಕಾರ್ಯನಿರ್ವಹಿಸುತ್ತಾರೆ. ರಾಜ್ಯದಲ್ಲಿ ಉರ್ದು ಅಂಗನವಾಡಿ ಕೇಂದ್ರಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ 2792 ಸ್ಥಳಗಳಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಂಗನವಾಡಿ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶ ಸರ್ಕಾರದ ಮುಂದೆ ಇಲ್ಲ ಎಂದು ಕೂಡ ವಿವರಿಸಿದ್ದಾರೆ. ಕನಿಷ್ಠ ವೇತನ ನೀಡುವ ಕುರಿತು ಮತ್ತು ಹುದ್ದೆ ಕಾಯಂಗೊಳಿಸುವ ಬೇಡಿಕೆಯು ಸೇರಿದಂತೆ ಹಲವು ಬೇಡಿಕೆಗಳು ಸರ್ಕಾರದ ಮುಂದೆ ಇವೆ. ಗೌರವಧನ ಹೆಚ್ಚಳ ಕೂಡ ಇದರಲ್ಲಿ ಇದೆ. ಇವರಿಗೆ ಆರೋಗ್ಯ ಕರ್ನಾಟಕ ಯೋಜನೆ ವಿಸ್ತರಿಸುವ ಹಾಗೂ ಪಿಂಚಣಿ ಸೌಲಭ್ಯ ಮತ್ತು ಇಡಿಗಂಟು ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಿದ್ದು, ಸರ್ಕಾರ ಗಮನ ಹರಿಸಿದೆ ಎಂದು ಮಾಹಿತಿ ನೀಡಿದರು.