ಬೆಂಗಳೂರು: ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ಕುಟುಂಬಕ್ಕೆ ಪಕ್ಷದಿಂದ 25 ಲಕ್ಷ ಪರಿಹಾರ ಪ್ರಕಟಿಸಿದ ಬೆನ್ನಲ್ಲೇ ಸಚಿವ ಡಾ.ಅಶ್ವತ್ಥನಾರಾಯಣ ವೈಯಕ್ತಿಕವಾಗಿ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಿರೋಧಿ ಶಕ್ತಿಗಳ ಅಮಾನುಷ ಕ್ರೌರ್ಯಕ್ಕೆ ಬಲಿಯಾದ ಬಿಜೆಪಿ ಕಾರ್ಯಕರ್ತ ಮತ್ತು ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ವೈಯಕ್ತಿಕ ವಾಗಿ 10 ಲಕ್ಷ ರೂ. ನೀಡುತ್ತೇನೆ. ಆದರೆ ಇದನ್ನು ನೆರವು ಎಂದು ಹೇಳಲು ಇಷ್ಟ ಪಡುವುದಿಲ್ಲ. ಇದು ನನ್ನ ಕರ್ತವ್ಯವಾಗಿದೆ ಎಂದರು.
10 ಲಕ್ಷ ರೂ. ಚೆಕ್ ಅನ್ನು ಪ್ರವೀಣ್ ಅವರ ಕುಟುಂಬಕ್ಕೆ ತಲುಪಿಸಲಾಗುವುದು. ಅವರ ಬಲಿದಾನಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅವರು ಗದ್ಗದಿತರಾದರು. ಪ್ರವೀಣ್ ಹಂತಕರು ಎಲ್ಲೇ ಇದ್ದರೂ ಕಠಿಣ ಕ್ರಮ ಜರುಗಿಸಲಾಗುವುದು. ಪಕ್ಷದ ಕಾರ್ಯಕರ್ತರ ಆಕ್ರೋಶ ನನಗೆ ಅರ್ಥವಾಗುತ್ತದೆ. ಅಪರಾಧಿಗಳ ಹೆಡೆಮುರಿ ಕಟ್ಟುವ ಶಕ್ತಿ ಬಿಜೆಪಿ ಸರ್ಕಾರಕ್ಕಿದೆ ಎಂದು ಸಚಿವರು ಪ್ರತಿಕ್ರಿಯಿಸಿದರು. ಕೆಲ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ ಕುಟುಂಬಕ್ಕೂ ಸಚಿವರು ನೆರವು ನೀಡಿದ್ದರು.
(ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ಮೇಲೆ 66 ಕೋಮು ದಳ್ಳುರಿ ಕೇಸ್: ಆರೋಪಿಗಳಿಗೆ ಶಿಕ್ಷೆ ಮಾತ್ರ ಶೂನ್ಯ!)
ಬಿಜೆಪಿಯಿಂದ ಪರಿಹಾರ: ಪ್ರವೀಣ್ ನೆಟ್ಟಾರು ಹತ್ಯೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮೃತ ಪ್ರವೀಣ್ ಕುಟುಂಬಕ್ಕೆ ಪಕ್ಷದ ವತಿಯಿಂದ ಪಕ್ಷದ ರಾಜ್ಯಾಧ್ಯಕ್ಷರು 25 ಲಕ್ಷ ರೂ. ಪರಿಹಾರ ರೂಪದಲ್ಲಿ ಕೊಡಲಿದ್ದಾರೆ. ಮೃತರ ಮನೆಯ ಕನಸನ್ನು ನನಸಾಗಿಸುವ ನಿರ್ಧಾರವನ್ನು ಪಕ್ಷದ ರಾಜ್ಯಾಧ್ಯಕ್ಷರು ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ್ ತಿಳಿಸಿದರು.
(ಇದನ್ನೂ ಓದಿ: ಪ್ರವೀಣ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, ಮನೆ ನಿರ್ಮಿಸಿ ಕೊಡಲು ಬಿಜೆಪಿ ನಿರ್ಧಾರ)