ಮಹದೇವಪುರ (ಬೆಂಗಳೂರು): ಮಹದೇವಪುರ ಕ್ಷೇತ್ರದ ಗ್ರಾಮಾಂತರ ಮಂಡಲದಲ್ಲಿ ಚಿಕ್ಕಬೈರತಿ, ಬೈರತಿ ಬಂಡೆ, ಕಾಡು ಸೊಣ್ಣಪ್ಪನ ಹಳ್ಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹಾಗೂ ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಈ ವೇಳೆ ಮಾತನಾಡಿದ ಸಚಿವ ಭೈರತಿ ಬಸವರಾಜ್, ಕಾಡು ಸೊಣ್ಣಪ್ಪನ ಹಳ್ಳಿ ಗ್ರಾಮಕ್ಕೆ ಸಚಿವ ಅರವಿಂದ ಲಿಂಬಾವಳಿ 9 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆ, ವಿದ್ಯುತ್ ದೀಪಗಳು ಸೇರಿದಂತೆ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ. ಅವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡಣ್ಣ ಹಾಗೂ ಸಂಗಡಿಗರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.
ವಸತಿ ಯೋಜನೆ ಅಡಿ ಪ್ರತಿ ಗ್ರಾಮದಲ್ಲಿ ನೂರು ಮನೆಗಳನ್ನು ನಿರ್ಮಿಸಬೇಕೆಂದು ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಶೀಘ್ರದಲ್ಲೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಿಜೆಪಿ ಪಕ್ಷ ಅನೇಕ ಜನಪರ ಯೋಜನೆಗಳನ್ನು ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಕಣ್ಣೂರು ಪಂಚಾಯಿತಿ ಹಾಗೂ ದೊಡ್ಡಗುಬ್ಬಿ ಪಂಚಾಯಿತಿಯಿಂದ 71 ಕೋಟಿ ರೂ. ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ನೀಡಲಾಗಿದೆ. ಅನೇಕ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಈ ಭಾಗದ ಜನರ ಅನುಕೂಲಕ್ಕಾಗಿ ಗೋಶಾಲೆ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಾನು ಹಾಗೂ ಭೈರತಿ ಬಸವರಾಜ್ ಇಬ್ಬರು ಸೇರಿ ಮಹದೇವಪುರ ಕ್ಷೇತ್ರ ಹಾಗೂ ಕೆ.ಆರ್.ಪುರ ಕ್ಷೇತ್ರದಲ್ಲಿ ಜೋಡೆತ್ತುಗಳ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಸಾವಿರಾರು ಜನರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಇದನ್ನೂ ಓದಿ: ರಾಜ್ಯದಲ್ಲಿ BSY ಸರ್ಕಾರದ ದ್ವಿತೀಯ ವರ್ಷದ ಸಾಧನೆಗಳಿವು!