ಬೆಂಗಳೂರು : ಕುಡಿದ ಮತ್ತಿನಲ್ಲಿ ನಿನ್ನೆ ತಡರಾತ್ರಿ ರಸ್ತೆಯಲ್ಲಿ ಅಡ್ಡಗಟ್ಟಿ ಮೊಬೈಲ್ ಕಸಿದುಕೊಳ್ಳಲು ಮುಂದಾದ ವ್ಯಕ್ತಿಯ ಮೇಲೆ ಕಲ್ಲಿನಿಂದ ಹೊಡೆದು ವ್ಯಕ್ತಿಯೋರ್ವ ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ಕೋಣನಕುಂಟೆ ನಿವಾಸಿಯಾಗಿರುವ ಮಂಜುನಾಥ್‌ನನ್ನು ಹತ್ಯೆ ಮಾಡಿದ ಆರೋಪದಡಿ ಮಂಡ್ಯ ಮೂಲದ ಶರತ್ ಎಂಬಾತನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಚಿಕನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ತನ್ನ ತಾಯಿಯೊಂದಿಗೆ ವಾಸವಾಗಿದ್ದ. ಮಂಜುನಾಥ್ ವಿರುದ್ಧ 2014ರಲ್ಲಿ ಕಳ್ಳತನ ಪ್ರಕರಣ ದಾಖಲಾಗಿ ಈತನ ವಿರುದ್ಧ ರೌಡಿಶೀಟರ್ ತೆರೆಯಲಾಗಿತ್ತು.
ಕೆಲ ವರ್ಷಗಳಿಂದ ಅಪರಾಧ ಚಟುವಟಿಕೆಯಿಂದ ದೂರ ಇದ್ದಿದ್ದರಿಂದ 2019ರಲ್ಲಿ ರೌಡಿಶೀಟರ್ ಪಟ್ಟಿಯಿಂದ ಈತನನ್ನು ತೆಗೆಯಲಾಗಿತ್ತು. ಕಳೆದ ಐದು ವರ್ಷದ ಹಿಂದೆ ಮದುವೆಯಾಗಿದ್ದ ಈತನಿಗೆ ಮಕ್ಕಳಾಗಿರಲಿಲ್ಲ. ಅನಾರೋಗ್ಯದಿಂದ ಮಂಜುನಾಥ್ ಪತ್ನಿ ಒಂದೂವರೆ ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಇದರಿಂದ ಬೇಸತ್ತು ಕುಡಿತದ ದಾಸನಾಗಿ ಓಡಾಡಿಕೊಂಡಿದ್ದ.
ಇನ್ನೂ ಆರೋಪಿ ಶರತ್‌ನನ್ನು ನಿನ್ನೆ ರಾತ್ರಿ ಮೃತ ಮಂಜುನಾಥ್ ಮತ್ತು ಆತನ ಇಬ್ಬರು ಸ್ನೇಹಿತರು ಅಡ್ಡಗಟ್ಟಿದ್ದಾರೆ. ಈ ವೇಳೆ ಮೊಬೈಲ್ ಕೊಡುವಂತೆ ಮಂಜುನಾಥ್ ತಾಕೀತು ಮಾಡಿದ್ದ. ಮೊಬೈಲ್ ಕೊಡಲು ನಿರಾಕರಿಸಿದ ಶರತ್‌ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಇಬ್ಬರು ಜಗಳವಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಗಾಂಜಾ ಮಾರಾಟ: ಐವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ
ಗಲಾಟೆ ತೀವ್ರಗೊಂಡು ಅಲ್ಲೇ ಇದ್ದ ಸಿಮೆಂಟ್ ಕಲ್ಲಿನಿಂದ ಶರತ್ ಕಾಲಿಗೆ ಹೊಡೆದಿದ್ದಾನೆ. ಇದಕ್ಕೆ ಪ್ರತಿರೋಧವಾಗಿ ಅದೇ ಕಲ್ಲನ್ನು ಕಸಿದು ಮಂಜುನಾಥ್ ತಲೆ ಮೇಲೆ ಹೊಡೆದಿದ್ದಾನೆ.
ಕುಡಿತದ ಮತ್ತಿನಲ್ಲಿದ್ದ ಮಂಜುನಾಥ್ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಯಲಿದ್ದ ಇಬ್ಬರು ಸ್ನೇಹಿತರು ಪರಾರಿಯಾಗಿದ್ದಾರೆ. ಕೃತ್ಯ ಎಸಗಿದ ಬಳಿಕ ಕೋಣನಕುಂಟೆ ಪೊಲೀಸರಿಗೆ ಆರೋಪಿ ಶರತ್ ಸರೆಂಡರ್ ಆಗಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.