ಬೆಂಗಳೂರು: ಭಾನುವಾರವೂ ಸಹ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸ ಚಟುವಟಿಕೆಯಿಂದ ಕೂಡಿತ್ತು. ನಗರದ ಸದಾಶಿವನಗರ ನಿವಾಸಕ್ಕೆ ಬೆಳಗ್ಗೆ ರಾಮನಗರ ಜಿಲ್ಲಾ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ, ಸಮಾಲೋಚನೆ ನಡೆಸಿದರು. ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತಿತರ ಮುಖಂಡರು ಇದ್ದರು.
ಈ ಸಂದರ್ಭ ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ಗೆಲುವಿಗಾಗಿ ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಹಾಗೂ ಡಿಕೆಶಿ ಅವರು ಜಿಲ್ಲೆಯಾಗಿರುವ ರಾಮನಗರದಲ್ಲಿ ಹೆಚ್ಚಿನ ಬಲ ಹೊಂದುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.
ಅತ್ಯಂತ ಪ್ರಮುಖವಾಗಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲುವಿಗೆ ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಯಲು ಹಾಗೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಹೆಚ್ಚಿನ ಶ್ರಮ ತೊಡಗಿಸುವ ಕುರಿತು ಡಿಕೆಶಿ ನಾಯಕರಿಗೆ ಸಲಹೆ ಸೂಚನೆ ನೀಡಿದರು.
ಅಭಿನಂದನೆ ಸಲ್ಲಿಕೆ
ಇದಾದ ಬಳಿಕ ಕೇಂದ್ರದ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರ ಮೊಮ್ಮಗ ವಿನಯ್ ಎನ್. ಶ್ಯಾಮ್ ಅವರು ಡಿಕೆಶಿ ಭೇಟಿ ಮಾಡಿ ಸಮಾಲೋಚಿಸಿದರು. ಇದೇ ಸಂದರ್ಭದಲ್ಲಿ ತಮ್ಮನ್ನು ಕೆಪಿಸಿಸಿ ನೂತನ ಸದಸ್ಯರನ್ನಾಗಿ ಮಾಡಿರುವ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಿದರು. ಚಿಕ್ಕಬಳ್ಳಾಪುರ ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಮತ್ತಿತರರು ಹಾಜರಿದ್ದರು.