ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವಕನ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಆದ್ರೆ ಇದರಲ್ಲಿ ಮಧ್ಯ ಪ್ರವೇಶ ಮಾಡಲು ನಾವು ತಯಾರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವುದು ಅನ್ಯಾಯ. ಯುವಕನ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಇದರಲ್ಲಿ ರಾಜಕಾರಣ ಮಾಡಿದ್ರೆ ಉಪಯೋಗ ಇಲ್ಲ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ ಸಾಕು ಎಂದರು.
ಕಾರ್ಯಕರ್ತರ ಆಕ್ರೋಶ, ಜನರ ಆಕ್ರೋಶ ಮೊದಲಿಂದ ಇದೆ. ಪ್ರಾರಂಭದಿಂದ ಒಂದೊಂದೇ ನಿಯಂತ್ರಣ ಮಾಡಿದ್ರೆ ಈ ಘಟನೆ ಆಗುತ್ತಿರಲಿಲ್ಲ. ನೀವು ಏನಾದರೂ ತನಿಖೆ ಮಾಡಿ. ಯಾರನ್ನಾದರೂ ಬ್ಯಾನ್ ಮಾಡಿ. ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಸರ್ಕಾರಕ್ಕೆ ಡಿಕೆಶಿ ಆಗ್ರಹಿಸಿದರು.
ರಾಜ್ಯಕ್ಕೆ ಶಾಂತಿ ಕೊಡಿ ಸಾಕು. ಅವರವರ ಧರ್ಮವನ್ನು ರಕ್ಷಣೆ ಮಾಡುವ ಕೆಲಸ ಅವರವರೇ ಮಾಡ್ತಾರೆ. ನೀವು ಅವರು ಕಾರಣ, ಇವರು ಕಾರಣ ಎನ್ನುವ ಬದಲು ಪೊಲೀಸರಿಗೆ ಫ್ರೀ ಹ್ಯಾಂಡ್ ಬಿಡಬೇಕು ಎಂದು ಸಲಹೆ ನೀಡಿದರು.
ನಾನು ನಿನ್ನೆ ಸಂಜೆ ಅಲ್ಲಿಗೆ ಹೋಗಬೇಕು ಎಂದು ತೀರ್ಮಾನ ಮಾಡಿದ್ದೆ. ಪರಿಸ್ಥಿತಿ ವಿಕೋಪವಿದೆ ಬೇಡ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ರು. ಜನ ಅಲ್ಲಿನ ಎಂ ಪಿ, ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ನಾಲ್ಕು ದಿನ ಆದ ಮೇಲೆ ಬಂದು ಹೋಗಿ ಎಂದರು. ಹಾಗಾಗಿ ನಾನು ಸುಮ್ಮನಾದೆ. ಘಟನೆಯಿಂದ ನಮ್ಮ ಪಕ್ಷಕ್ಕೆ ಶಾಕ್ ಆಗಿದೆ ಎಂದು ಡಿಕೆಶಿ ಹೇಳಿದ್ರು.
ಸಂಸದ ತೇಜಸ್ವಿ ಸೂರ್ಯ ಆಡಿಯೋಗೆ ಪ್ರತಿಕ್ರಿಯೆ ನೀಡಿದ ಅವರು, ತೇಜಸ್ವಿ ಸೂರ್ಯ ಮೊದಲಿನಿಂದಲು ಬಹಳ ವ್ಯವಸ್ಥಿತವಾಗಿ ಸಂಚು ಮಾಡಿದ್ದಾರೆ. ಅವರ ಕಾರ್ಯಕರ್ತರಿಗೆ ನೇರವಾಗಿಯೆ ಇದನ್ನ ಮಾಡಿ ಅಂತ ಮಾಹಿತಿಯನ್ನ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಓದಿ: ಪ್ರವೀಣ್ ಹತ್ಯೆ ಹಿನ್ನೆಲೆ ಆತ್ಮಸಾಕ್ಷಿ ಮೂಲಕ ಜನೋತ್ಸವ ಸಮಾರಂಭ ರದ್ದು: ಸಿಎಂ ಬೊಮ್ಮಾಯಿ