ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗ (ಒಪಿಡಿ) ಹಾಗೂ ಸರ್ಕಾರದಿಂದ ನಿಗದಿಪಡಿಸಲಾಗಿರುವ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡಿ ಕರ್ನಾಟಕ ನಿವಾಸಿ ವೈದ್ಯರ ಸಂಘ ಸರ್ಕಾರದ ವಿರುದ್ಧ ಧರಣಿ ನಡೆಸಲು ಮುಂದಾಗಿದೆ.
ಸರ್ಕಾರವು ರಾಜ್ಯದ ಯುವ ವೈದ್ಯರ ಕಡೆಗೆ ನಿರ್ಲಕ್ಷ್ಯ ತೋರುತ್ತಿದೆ. ರಾಜ್ಯದಲ್ಲಿ ಕೋವಿಡ್ ಅತ್ಯಂತ ತೀವ್ರವಾಗಿದ್ದ ಪರಿಸ್ಥಿತಿಯಲ್ಲಿ ರೆಸಿಡೆಂಟ್ ಹಾಗೂ ಇಂಟರ್ನ್ ಡಾಕ್ಟರ್ಸ್ಅನ್ನು ಮನಸ್ಸಿಗೆ ಬಂದ ಹಾಗೆ ಬಳಸಿಕೊಂಡು ಈಗ ಕೆಲಸ ಮುಗಿದ ನಂತರ ನಿರ್ಲಕ್ಷ್ಯ ತೋರುತ್ತಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಸೀಟು ಪಡೆದವರಿಗೆ ತಾರತಮ್ಯ : ಶೈಕ್ಷಣಿಕ ಶುಲ್ಕ ಪರಿಷ್ಕರಣೆ ಕುರಿತಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಸೀಟು ಪಡೆದವರಿಗೆ ಬಹಳ ತಾರತಮ್ಯವಾಗುತ್ತಿದೆ. ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೈಕ್ಷಣಿಕ ಶುಲ್ಕವನ್ನು ಪಡೆಯುತ್ತಿದೆ. ಹಾಗಾಗಿ ಇಂತಹ ಕೋವಿಡ್ ಪರಿಸ್ಥಿತಿಯಲ್ಲಿ ಹಗಲಿರುಳು ಶ್ರಮಿಸಿದ ನಿವಾಸಿ ವೈದ್ಯರುಗಳ (MD/MS/DM/Mchs) ಸೇವೆಯನ್ನು ಪರಿಗಣಿಸಿ ಈ ಮೂಲಕ ಶೈಕ್ಷಣಿಕ ಶುಲ್ಕವನ್ನು 2018ರ ಶೈಕ್ಷಣಿಕ ಸಾಲಿನ ಶುಲ್ಕದಂತೆ ಪುನಾರಚನೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಸಹ ಜಾಣ ಕಿವುಡುತನದ ಮನೋವೃತ್ತಿ ತೋರಿದೆ. ಶೈಕ್ಷಣಿಕ ಶುಲ್ಕವನ್ನೂ ಏಕಾಏಕಿ 30,000 ದಿಂದ ಒಂದು ಲಕ್ಷಕ್ಕೆ ಹೆಚ್ಚಿಸುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ.
ಕೊರೊನಾ ಎರಡನೆಯ ಅಲೆಯ ಸಂದರ್ಭದಲ್ಲಿ ಅನೇಕ ಯುವ ವೈದ್ಯರು ಹಾಗೂ ಅವರ ಕುಟುಂಬ ಸೋಂಕು ತಗಲಿ ಅನೇಕ ರೀತಿಯಲ್ಲಿ ನರಳಬೇಕಾಯಿತು. ಆಗ ಸರ್ಕಾರ ಕೇವಲ ಕಣ್ಣೀರು ಒರೆಸುವ ಕೆಲಸ ಮಾಡಿತು. ಕೋವಿಡ್ ಅಪಾಯ ಭತ್ಯೆ ನೀಡುವುದಾಗಿ ಆದೇಶ ಹೊರಡಿಸಿತೇ ಹೊರತು ಬಿಡಿಗಾಸು ಕೈ ಸೇರಿಲ್ಲ. ತಕ್ಷಣವೇ ಕೋವಿಡ್ ಅಪಾಯ ಭತ್ಯೆಯ ಅನುದಾನವನ್ನು ಬಿಡುಗಡೆ ಮಾಡಲು ಒತ್ತಾಯಿಸಿವೆ.
ರೆಸಿಡೆಂಟ್ ವೈದ್ಯರ ಮುಷ್ಕರ : ಕೋವಿಡ್ ಅಥವಾ ಕೋವಿಡೇತರ ಸೇವೆಗಳು ಎಂದು ನೋಡದೆ ಕಳೆದ 3 ತಿಂಗಳಿಂದ ನಿರಂತರವಾಗಿ ದುಡಿಯುತ್ತಿರುವ ಇಂಟರ್ನ್ ಹಾಗೂ ಪೋಸ್ಟ್ (MBBS) ಜೂನಿಯರ್ ಡಾಕ್ಟರ್ಸ್ಗೆ ಬಿಡಿಗಾಸು ಸ್ಟೈಪೆಂಡ್ ಕೂಡ ಸರ್ಕಾರ ನೀಡಿಲ್ಲ. ಅನೇಕ ಬಾರಿ ನಮ್ಮ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಕೂಡ ಸರ್ಕಾರದಿಂದ ಪ್ರತಿಕ್ರಿಯೆ ಬಾರದ ಕಾರಣ ಇದೀಗ ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಸಂಘದ ಅಧ್ಯಕ್ಷ ಡಾ.ತೇಜು ತಿಳಿಸಿದ್ದಾರೆ.
ಎಲ್ಲ ಮೆಡಿಕಲ್ ಕಾಲೇಜಿನಲ್ಲಿ ವೈದ್ಯ ವಿದಾರ್ಥಿಗಳು ಒಪಿಡಿ ಸೇವೆಗೆ ಗೈರುಹಾಜರಾಗಿ ಸರ್ಕಾರದ ಗಮನ ಸೆಳೆಯಲಿದ್ದಾರೆ. ಕೇವಲ ಆಸ್ಪತ್ರೆಯ ಸಿಬ್ಬಂದಿಯಿಂದ ಒಪಿಡಿ ಸೇವೆ ಇರಲಿದೆ.