ಬೆಂಗಳೂರು : ಕೊಡಗು ಜಿಲ್ಲೆಯ ಕುಶಾಲನಗರದ ತಾವರೆಕೆರೆ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಕೂಡಲೇ ಒತ್ತುವರಿ ತೆರವು ತೆರವುಗೊಳಿಸುವ ಸಂಬಂಧ ಕೈಗೊಳ್ಳುವ ಕ್ರಮಗಳ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ತಾವರೆಕೆರೆ ಸುತ್ತಲೂ ಒತ್ತುವರಿ ಮಾಡಿರುವ ಕುರಿತು ನಗರದ ವಕೀಲ ಎನ್.ಪಿ ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಈಗಾಗಲೇ ಕೆರೆ ಪ್ರದೇಶವನ್ನು ಸರ್ವೇ ಮಾಡಲಾಗಿದೆ. ಸರ್ವೆ ವೇಳೆ ಕೆರೆ ಪ್ರದೇಶದಲ್ಲಿ 19 ಒತ್ತುವರಿಗಳು ಕಂಡು ಬಂದಿವೆ. ಈ ಕುರಿತ ವರದಿಯನ್ನು ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಕೆರೆ ಪ್ರದೇಶದ ಸರ್ವೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಹಾಗೆಯೇ, ಕೆರೆ ಪ್ರದೇಶದಲ್ಲಿ ನಡೆದಿರುವ 19 ಒತ್ತುವರಿಗಳನ್ನು ತೆರವುಗೊಳಿಸಲು ಕೈಗೊಳ್ಳುವ ಕ್ರಮಗಳ ಕುರಿತು ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ ಹಿನ್ನೆಲೆ
ಕೊಡಗಿನ ಕುಶಾಲನಗರದಿಂದ ನಿಸರ್ಗಧಾಮಕ್ಕೆ ಹೋಗುವ ಮಾರ್ಗದಲ್ಲಿರುವ ತಾವರೆಕೆರೆ ದಾಖಲೆಗಳ ಪ್ರಕಾರ 19 ಎಕರೆ ಇದೆ. ಆದರೆ, ಈ ಕೆರೆ ಮತ್ತು ಸುತ್ತಲಿನ ಜಾಗವನ್ನು ಹಲವು ಪ್ರಭಾವಿಗಳು ಒತ್ತುವರಿ ಮಾಡಿ, ಹೋಂ ಸ್ಟೇ, ಕಾಲೇಜು, ವಿಲ್ಲಾಗಳನ್ನು ನಿರ್ಮಿಸಿದ್ದಾರೆ. ಇಂತಹ ಒತ್ತುವರಿಗಳಿಂದ ಕೆರೆ ಇದೀಗ ಕೇವಲ 1 ಎಕರೆ 30 ಗುಂಟೆಗೆ ಕುಗ್ಗಿದೆ. ಕೆರೆ ಪಕ್ಕದ ಕೃಷಿ ಜಾಗವನ್ನು ವಸತಿ ಪ್ರದೇಶಕ್ಕೆ ಪರಿವರ್ತಿಸಿಕೊಂಡು ರಾಜಕಾಲುವೆ ಮುಚ್ಚಿರುವುದರಿಂದ ಕೆರೆ ಅವನತಿ ಅಂಚಿಗೆ ತಲುಪಿದೆ.
ಇದನ್ನೂ ಓದಿ: ಸಿಎಂ ವಿದಾಯಕ್ಕೆ ವೇದಿಕೆ ಸಜ್ಜು : ಜು.26 ರಂದು ಬಿಎಸ್ವೈ ರಾಜೀನಾಮೆ ನಿರ್ಧಾರ?
ಅಲ್ಲದೆ, ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ಅವರು ಪ್ರಭಾವಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ವಿವೇಕಾನಂದ ಕಾಲೇಜಿನವರು ಕೆರೆಯ ಜಾಗದಲ್ಲಿ ಮಣ್ಣು ತುಂಬಿಸಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಮಾಡಿಕೊಂಡಿದ್ದಾರೆ. ಆದ್ದರಿಂದ ಕೆರೆ ಒತ್ತುವರಿ ತೆರವು ಮಾಡಿ ಸಂರಕ್ಷಿಸಲು ಸರ್ಕಾರ ಮತ್ತು ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.